

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಹಿನ್ನೆಲೆ ಸರ್ಕಾರದ ಗಮನ ಸೆಳೆಯಲು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬುಧವಾರ 14 ಸಂಘಟನೆಗಳಿಂದ ಪ್ರತಿಭಟನೆ ನಡೆದವು.
ಮೀಸಲಾತಿ ಪರ-ವಿರೋಧ, ಸೇವೆ ಕಾಯಂಗೊಳಿಸುವುದು, 2ಎ ಮೀಸಲಾತಿ ಪಟ್ಟಿಗೆ ಮುಂದುವರಿದ ಜಾತಿಗಳನ್ನು ಸೇರಿಸದಂತೆ ಒತ್ತಾಯ ಹೀಗೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಕೆ ಆದವು. ಈ ವೇಳೆ ಸರ್ಕಾರದ ಪರ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹಾದೇವಪ್ಪ ವತ್ತು ಶಿವರಾಜ ತಂಗಡಗಿ ಇಲ್ಲಿನ ಸುವರ್ಣ ಉದ್ಯಾನವನಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಮುಂದುವರಿದವರಿಗೆ 2ಎ ಮೀಸಲಾತಿ ಬೇಡಿಕೆ: ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದ ಯಾವುದೇ ಸಮುದಾಯವನ್ನು ಪ್ರವರ್ಗ 2ಎ ಮೀಸಲಾತಿ ಪಟ್ಟಿಯಲ್ಲಿ ಸೇರಿಸಬಾರದು ಎಂದು ಒತ್ತಾಯಿಸಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಬಹತ್ ಪ್ರತಿಭಟನೆ ನಡೆಸಲಾಯಿತು.
ಲಿಂಗಾಯತ ಪಂಚಮಸಾಲಿ ಸೇರಿದಂತೆ ಯಾವುದೇ ಮುಂದುವರಿದ ಸಮುದಾಯ 2ಎ ಮೀಸಲಾತಿ ಪಟ್ಟಿಗೆ ಸೇರಿಸಿದರೆ ಅತಿ ಹಿಂದುಳಿದ ಸಣ್ಣ ಪುಟ್ಟ ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಮುಂದುವರಿದ ಸಮುದಾಯಗಳನ್ನು ಸೇರಿಸಬಾರದು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ತಕ್ಷಣ ಜಾರಿಗೊಳಿಸಬೇಕು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವದ್ಧಿ ನಿಗಮಕ್ಕೆ 2500 ಕೋಟಿ ರೂ.ಹೆಚ್ಚುವರಿಯಾಗಿ ಒದಗಿಸಬೇಕು. ಸರ್ಕಾರದ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರ ಸ್ಥಾನಗಳಿಗೆ ಹಿಂದುಳಿದ ವರ್ಗದವರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು, ಹಿಂದುಳಿದ ವರ್ಗಕ್ಕೆ ಬರುವ ಒಟ್ಟು ಅನುದಾನದಲ್ಲಿ ಶೇ.75ರಷ್ಟು ಅನುದಾನ ಪ್ರವರ್ಗ-1, 2ಎ ಗೆ ನೀಡಬೇಕು ಎಂದು ಒತ್ತಾಯಿಸಲಾಯಿತು. ಕೆ.ಎಂ.ರಾಮಚಂದ್ರಪ್ಪ, ಸುರೇಶ ಲಾತೂರ, ಮಹದೇವ ಕೌಲಾಪುರ, ಶಿವಾನಂದ ಮರ್ಯಾಯಿ ಇದ್ದರು.
ಗಾಣಿಗ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಲಿ: ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಗಾಣಿಗ ಸಮುದಾಯಕ್ಕೆ ಗಾಣಿಗ ಅಭಿವದ್ಧಿ ನಿಗಮ ಮಂಡಳಿ ಅನುಷ್ಠಾನವನ್ನು ಅಧಿಕತಗೊಳಿಸುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ಸದಸ್ಯರು ಪ್ರತಿಭಟನೆ ನಡೆಸಿದರು. ಗಾಣಿಗ ಸಮಾಜದ ಬಹುದಿನದ ಬೇಡಿಕೆಯಾದ ಗಾಣಿಗ ಅಭಿವದ್ಧಿ ನಿಗಮ ಮಂಡಳಿಯ ಅನುಷ್ಠಾನ, ಅಧಿಕತ ಕಚೇರಿ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಗಾಣಿಗ ಅಭಿವದ್ಧಿ ನಿಗಮಕ್ಕೆ 200 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ೋಷಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು. ಆನಂದ ಮಂಡ್ಯ, ಪರಸಪ್ಪ ಗಡದಿನ್ನಿ,ಆರ್ ಅನಂತಯ್ಯ, ವೆಂಕಟೇಶ ಭದ್ರಾವತಿ ಇದ್ದರು.
ಗ್ರಾಪಂ ನೌಕರರಿಗೆ 31 ಸಾವಿರ ರೂ.ವೇತನ ನೀಡಲಿ: ಗ್ರಾಪಂ ನೌಕರರಿಗೆ ಕನಿಷ್ಠ ವೇತನ 31 ಸಾವಿರ ರೂ.ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಪಂ ನೌಕರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಗ್ರಾಪಂ ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆ ನಿಗದಿಗೊಳಿಸಬೇಕು. ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ, ಕನಿಷ್ಠ ವೇತನ 31 ಸಾವಿರ ನಿಗದಿಗೊಳಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು. ಯಲ್ಲಪ್ಪ ನಾಯಕ, ಎಂ.ಬಿ. ನಾಗಗೌಡ, ಜಿ. ಎಂ.ಜೈನೇಖಾನ್, ವಿ.ಎನ್.ಕಂಪ್ಲಿ, ಗಣಪತಿ ಗುರವ ಇತರರಿದ್ದರು.
ಬಾಕಿ ಬಿಲ್ ಪಾವತಿಸುವಂತೆ ಮನವಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವಾರು ವರ್ಷಗಳಿಂದ ಗುತ್ತಿಗೆದಾರರಿಗೆ ಕಾಮಗಾರಿ ಬಿಲ್ ಪಾವತಿ ಮಾಡಿಲ್ಲ. ಇದರಿಂದಾಗಿ ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೂಡಲೇ ಬಾಕಿ ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾರ್ಯನಿರತ ಗುತ್ತಿಗೆದಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿದ ನಂತರ ಹೊಸ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಅನಗತ್ಯ ಅರ್ಹತೆ ಹಾಗೂ ನಿಯಮಗಳನ್ನು ಹೇರಿ ಸ್ಥಳೀಯ ಗುತ್ತಿಗೆದಾರರನ್ನು ಅನರ್ಹಗೊಳಿಸಿ ಹೊರ ರಾಜ್ಯದವರಿಗೆ ಗುತ್ತಿಗೆ ಕಾಮಗಾರಿ ನೀಡುವುದನ್ನು ಖಂಡಿಸಿದರು. ಆರ್.ಡಿ.ಪದ್ಮಣ್ಣವರ, ಎಸ್.ಆರ್.ಘೂಳಪ್ಪನವರ, ಮಹೇಶ ಗುಮಚಿ ಭಾಗವಹಿಸಿದ್ದರು.
ಅಂಗನವಾಡಿಯಲ್ಲೇ ಎಲ್‌ಕೆಜಿ, ಯುಕೆಜಿ ನಡೆಯಲಿ: ಗುಜರಾತ್ ಹೈಕೋರ್ಟ್ ಆದೇಶದಂತೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಯನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. 2018 ರಿಂದ ಗೌರವಧನ ಹೆಚ್ಚಳವಾಗಿಲ್ಲ. ಕೂಡಲೇ ಕೇಂದ್ರ ಸರ್ಕಾರ 26 ಸಾವಿರ ರೂ. ಗೌರವಧನ ಹೆಚ್ಚಿಸಬೇಕು. ನಿವತ್ತಿ ಹೊಂದಿದವರಿಗೆ ಶೀಘ್ರ ಎನ್‌ಪಿಎಸ್ ಹಣ ಕೊಡಬೇಕು. ಮಾಸಿಕ 10 ರೂ. ಸಾವಿರ ಪಿಂಚಣಿ ನೀಡಬೇಕು ಹಾಗೂ ಶಿಕ್ಷಣ ಇಲಾಖೆ ಮತ್ತು ಎಸ್‌ಡಿಎಂಸಿಗಳಿಂದ ಪ್ರಾರಂಭಿಸಿರುವ ಎಲ್‌ಕೆಜಿ, ಯುಕೆಜಿ ನಿಲ್ಲಿಸಿ, ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸವ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಎಸ್ ವರಲಕ್ಷಿ , ಎಚ್.ಎಸ್ ಸುನಂದ, ಗೈಬೂ ಜೈನಿಕಾನ್, ದೊಡ್ಡವಾಡ ಪೂಜಾರ ಇದ್ದರು.
ಅತಿಥಿ ಉಪನ್ಯಾಸಕರ ಕಾಯಂಗೆ ಆಗ್ರಹ: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವಂತೆ ಒತ್ತಾಯಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ವಿಧಾನ ಸೌಧದ ಬಳಿಯ ಸುವರ್ಣ ಉದ್ಯಾನವನದಲ್ಲಿ ಧರಣಿ ನಡೆಸಿದರು. ಅತಿಥಿ ಉಪನ್ಯಾಸಕರನ್ನು 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಸೇವೆಯಿಂದ ತೆರವುಗೊಳಿಸಿದ್ದು ಖಂಡನೀಯ. ಇದರಿಂದ ಮಾನಸಿಕ, ಆರ್ಥಿಕವಾಗಿ ತೊಂದರೆಯಾಗಿದೆ. ಜೀವನ ನಿರ್ವಹಣೆಯೂ ಕಷ್ಟವಾಗಿದೆ. ಸಾಮಾನ್ಯ ಸಂದರ್ಶನ ಮಾಡಬೇಕು, ಸಂದರ್ಶನ ನಡೆಯುವರೆಗೂ ಸೇವೆಯಿಂದ ಹೊರಗುಳಿದ ಅತಿಥಿ ಉಪನ್ಯಾಸಕರಿಗೆ ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು. ವೆಂಕಪ್ಪ ಮೊರೆ, ಒಬ್ಬಳ ರೆಡ್ಡಿ, ದರ್ಶನಕುಮಾರ ಎಸ್.ಪಿ.ಇದ್ದರು.