

ಬೆಂ.ಗ್ರಾಮಾಂತರ/ಕುಂದಾಣ: ದಲಿತರ ಭೂಮಿ ಕಬಳಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯಕೊಡಿಸಬೇಕು. ಈ ಬಗ್ಗೆ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು ಎಂದು ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಒತ್ತಾಯಿಸಿದರು.
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದೇವನಹಳ್ಳಿ ತಾಲೂಕು ಬೀರಸಂದ್ರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಗುರುವಾರ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಭೂಮಿಗಳ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಕೊಡಬೇಕು,ಭೂಕಬಳಿಕೆ ಮಾಡಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲೂಕುಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಸಮುದಾಯಗಳ ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡಿ ಅವರಿಗೆಲ್ಲರಿಗೂ ಹಕ್ಕು ಪತ್ರ ನೀಡಬೇಕು, ಪ್ರಭಾವಿಗಳಿಂದ ಬಡವರ ಜಮೀನುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ರಾಮನಾಥಪುರದಲ್ಲಿ ದಲಿತರಿಗೆ ಸ್ಮಶಾನಕ್ಕಾಗಿ ಜಮೀನು ಕಾಯ್ದಿರಿಸಬೇಕು, ಕುಂದಾಣ ಹೋಬಳಿಯ ಇಲ್ತೊರೆ ಗ್ರಾಮದ ಸರ್ವೇ ನಂ 46 ರಲ್ಲಿನ 3 ಎಕರೆ ಜಮೀನಿನ ಮೂಲಪತ್ರ ಮತ್ತು ಅರ್ಹ ದಾಖಲೆಗಳನ್ನು ಹೊಂದಿರುವ ಬಡ ಪರಿಶಿಷ್ಟ ಸಾಗುವಳಿದಾರರಿಗೆ ರಕ್ಷಣೆ ನೀಡಿ ಸಾಗುವಳಿ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಅಕ್ರಮ ಖಾತೆ ತನಿಖೆ ಮಾಡಿ: ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯ ಸರ್ವೇ ನಂ 45 ರಲ್ಲಿರುವ 4ಎಕರೆ ಜಮೀನನ್ನು ಗುಜರಾತ್ ಮೂಲದ ಉದ್ಯಮಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ, ಕೂಡಲೇ ಅದನ್ನು ರದ್ದು ಮಾಡಿ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಆಗ್ರಹಿಸಿದರು.
ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಹೋಬಳಿಯ ತಾವರೆಕೆರೆ ಸರ್ವೇ ನಂ 62 ರಲ್ಲಿ 22.31 ಎಕರೆ ಜಮೀನಿದ್ದು, ಹಿಂದುಗಳ ಸ್ಮಶಾನಕ್ಕಾಗಿ 1 ಎಕರೆ ಮತ್ತು ಮುಸ್ಲಿಮರ ಸ್ಮಶಾನಕ್ಕಾಗಿ 1 ಎಕರೆ ಜಮೀನನ್ನು ಮಂಜೂರು ಮಾಡಿಕೊಡಬೇಕು ಮತ್ತು ಈ ಭಾಗದಲ್ಲಿನ ಭೂಕಬಳಿಕೆದಾರರ ವಿರುಧ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಎಡಿಸಿಗೆ ಮನವಿ: ದಲಿತರಿಗೆ ಭೂಮಿ ಹಂಚಿಕೆ, ಭೂಕಬಳಿಕೆದಾರರ ವಿರುದ್ಧ ಕ್ರಮಕೈಗೊಳ್ಳುವುದು, ಸ್ಮಶಾನಭೂಮಿ ಮೀಸಲಿಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆ ಮುಖಂಡರು ಅಪರ ಜಿಲ್ಲಾಧಿಕಾರಿ ವಿಜಯಾ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ, ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.