

ಹಾಸನ: ಎಪಿಎಂಸಿ ಮತ್ತು ರೈತ ವಿರೋಧಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಲಿಂಗಪ್ಪ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೆ ಭೂಮಿ ಒಡೆಯ ಎಂಬ ಮಹಾತ್ವಕಾಂಕ್ಷೆಯ ಉದ್ದೇಶಕ್ಕೆ ಕೂಡಲಿ ಪೆಟ್ಟು ನೀಡಿದೆ. ರೈತರ ಪರವಾಗಿ ಸುಧಾರಣೆ ತರಬೇಕಾದ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ಹೈನುಗಾರಿಕೆಗೆ ದೊಡ್ಡ ಪೆಟ್ಟು ನೀಡಿದೆ. ಈ ಮೂರು ತಿದ್ದುಪಡಿ ಕಾಯ್ದೆಗಳು ರೈತ ಸಮುದಾಯಕ್ಕೆ ಮಾತ್ರವಲ್ಲ ಸಮಾಜಕ್ಕೂ ಮಾರಕವಾಗಿದೆ. ಇದರ ವಿರುದ್ಧ 2020ರಿಂದಲೂ ನಿರಂತರವಾಗಿ ರೈತರು, ದಲಿತರು, ಕಾರ್ಮಿಕರು, ಮಹಿಳೆಯರು, ಪ್ರಗತಿಪರರು ಐಕ್ಯತಾ ಹೋರಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಈಗಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.
ತಾಲೂಕು ಅಧ್ಯಕ್ಷ ಯು.ಎಲ್.ಶಾಂತರಾಜೇ ಅರಸು ಮಾತನಾಡಿ, ರೈತರಿಗೆ ಸಹಾಯವಾಗಲೆಂದು ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಸರ್ಕಾರದ ಕೃಷಿ ಯಂತ್ರಧಾರೆ ಯೋಜನೆಯಡಿ ಟ್ರಾೃಕ್ಟರ್, ಬೆಳೆ ಕಟಾವು ಯಂತ್ರ, ಸ್ಪೇಯರ್, ಪವರ್ ಟೆಲ್ಲರ್ ಸೇರಿ ಇನ್ನಿತರ ಹಲವು ಯಂತ್ರಗಳನ್ನು ಒದಗಿಸಬೇಕು. ಆದರೆ, ಆರ್ಹ ಫಲಾನುಭವಿಗಳಿಗೆ ಈ ಯೋಜನೆ ತಲುಪಿಸುವಲ್ಲಿ ಏಜೆನ್ಸಿಗಳು ವಿಫಲವಾಗಿದ್ದು, ಇದರಿಂದ ಹೋಬಳಿ ಕೇಂದ್ರಗಳು ಮುಚ್ಚುವಂತಾಗಿವೆ. ರೈತರಿಗೆ ಯಂತ್ರಗಳನ್ನು ಒದಗಿಸಲು ನೀಡಿದ್ದ ಅನುದಾನವನ್ನು ಏಜೆನ್ಸಿಗಳು ದುರ್ಬಳಕೆ ಮಾಡಿಕೊಂಡಿವೆ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅಂತಹ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಅಕ್ರಮದ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ.ರಘು, ಅರಸೀಕೆರೆ ತಾಲ್ಲೂಕು ಅಧ್ಯಕ್ಷ ಶಿವಮೂರ್ತಿ, ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷ ಎಸ್.ಎಸ್. ರಾಮಚಂದ್ರ, ಎಚ್.ಆರ್. ದಿನೇಶ್, ರಮೇಶ್, ಸೋಮಶೇಖರ್ ಸೇರಿದಂತೆ ಇತರರು ಇದ್ದರು.