ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಸತಿ ಶಾಲಾ ಶಿಕ್ಷಕರ ಪ್ರತಿಭಟನೆ

02_HSN_04
Published on

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಗೂ ತಮ್ಮನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಆಗ್ರಹಿಸಿ ಕರ್ನಾಟಕ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಡೆಯುತ್ತಿರುವ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದೆ.

ಮೇ 26 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎರಡು ದಿನಗಳ ಪ್ರತಿಭಟನೆ ನಡೆಸಿದ ಶಿಕ್ಷಕರು ಮೇ 29 ರಂದು ಶಾಲೆಗಳಲ್ಲಿ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು. 30ರಂದು ಜಿಲ್ಲಾಮಟ್ಟದಲ್ಲಿ ತರಗತಿ ಬಹಿಷ್ಕರಿಸಲಾಗಿತ್ತು. 31 ರಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆ ಮುಂದುವರಿದ ಭಾಗವಾಗಿ ಸೋಮವಾರದಿಂದ ಹಾಸನದ ಡಿಸಿ ಕಚೇರಿಗಳ ಎದುರು ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ್ದಾರೆ.

ಜಿಲ್ಲಾ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷೆ ಉಷಾ ಮಾತನಾಡಿ, ಪ್ರಮುಖವಾಗಿ ನಾವು ಕೂಡ ಸರ್ಕಾರಿ ನೌಕರರಿಗಿಂತ ಹೆಚ್ಚಿನ ಅವಧಿ ಕೆಲಸ ನಿರ್ವಹಿಸುತ್ತೇವೆ. ಆದರೆ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸರ್ಕಾರ ಹಿಂದೇಟು ಹಾಕಿದೆ. ಕೂಡಲೇ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಬೇರೆ ವಸತಿ ಶಾಲೆಗಳ ಶಿಕ್ಷಕರಿಗೆ ಹೋಲಿಸಿದರೆ ನಾವು ಅನೇಕ ರೀತಿಯ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಅವುಗಳನ್ನು ಈಡೇರಿಸಿ ಎಂದು ರಾಜ್ಯಾದ್ಯಂತ ಕ್ರೈಸ್ ಸಂಸ್ಥೆಯಡಿ ಇರುವ ಸುಮಾರು 6800 ಮಂದಿ ಇರುವ ಕಾಯಂ ಶಿಕ್ಷಕರು ಕಳೆದ 13 ವರ್ಷಗಳಿಂದ ಹೋರಾಟ ಸಹ ಮಾಡುತ್ತಿದ್ದರೂ, ಯಾವುದೇ ಸ್ಪಂದನೆ ಸಿಕ್ಕಿಲ್ಲ. ಪರಿಶಿಷ್ಟಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಡ ಪ್ರತಿಭಾವಂತ ಮಕ್ಕಳು ಓದುತ್ತಿರುವ, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮೊದಲಾದ ವಸತಿ ಶಾಲೆಗಳಲ್ಲಿ ಕಲಿಯುತ್ತಿದ್ದು, ಓದುವುದರಿಂದ ಹಿಡಿದು, ಪ್ರತಿಭಾ ಕಾರಂಜಿ ಮೊದಲಾದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಮ್ಮ ಶಾಲೆಗಳ ಮಕ್ಕಳೇ ಉತ್ತಮ ಪ್ರತಿಭೆ ಪ್ರದರ್ಶನ ಮಾಡುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ಶಾಲೆಯ ಮಕ್ಕಳು ರಾಜ್ಯಮಟ್ಟದ ಬ್ಯಾಂಕ್ ಪಡೆಯುತ್ತಿದ್ದಾರೆ. ನಾವು ನೀಡುವ ಗುಣಾತ್ಮಕ ಶಿಕ್ಷಣದಿಂದ ಹೆಸರುವಾಸಿಯಾಗಿರುವ ವಸತಿ ಶಾಲಾ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಬಗ್ಗೆ ಕಡೆಗಣನೆ ಬೇಡ ಎಂದರು.

ನಮ್ಮನ್ನೂ ಸರ್ಕಾರಿ ನೌಕರರೆಂದು ಪರಿಗಣಿಸುವಂತಾಗಲು ನಿರ್ದೇಶನಾಲಯ ರಚನೆ ಮಾಡಬೇಕು. ಇಲ್ಲವಾದರೆ ಆಯಾಯ ಇಲಾಖೆಗಳ ವ್ಯಾಪ್ತಿಗೆ ನಮ್ಮ ಶಾಲೆಗಳನ್ನು ವಿಲೀನ ಮಾಡಬೇಕು. ಅಪಘಾತ ಮತ್ತಿತರ ಸಂದರ್ಭಗಳಲ್ಲಿ ನೆರವಾಗಲು ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆ ವ್ಯಾಪ್ತಿಗೆ ನಮ್ಮನ್ನೂ ಸೇರಿಸಬೇಕು. ನಮ್ಮ ತಿಂಗಳ ಸಂಬಳದಲ್ಲಿ ಬಾಡಿಗೆ ಭತ್ಯೆಯನ್ನು ಕಟಾವಣೆ ಮಾಡಬಾರದು. ಬೇರೆ ವಸತಿ ಶಾಲೆಗಳ ಶಿಕ್ಷಕರಿಗೆ ನೀಡುತ್ತಿರುವಂತೆ ಸಂಪೂರ್ಣ ಸಂಬಳ ಪಾವತಿ ಮಾಡಬೇಕು. ಇತರರಿಗೆ ಕೊಡುತ್ತಿರುವಂತೆಯೇ ನಮಗೂ ಶೇ.10 ರಷ್ಟು ವಿಶೇಷ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು. ಹಾಗೆಯೇ ಕರ್ನಾಟಕ ಆರೋಗ್ಯ ಸಂಜೀವಿನಿ ಸೌಲಭ್ಯ ನಮಗೂ ಸಿಗಬೇಕು. ಮರಣ-ನಿವೃತ್ತಿ ಉಪಧನ(ಡಿಸಿಆರ್‌ಜಿ) ನಮಗೂ ಸಿಗಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ಪದಾಧಿಕಾರಿಗಳಾದ ಶಂಕರ್, ನೇಹಾಲ್, ಕೀರ್ತಿ, ಶಿಲ್ಪಾ, ದಯಾನಂದ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net