

ಹುಲಸೂರು: ತಾಲೂಕಿಗೆ ಹಳ್ಳಿಗಳ ಸೇರ್ಪಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹುಲಸೂರು ತಾಲೂಕು ಮತ್ತು ಬಸವಕಲ್ಯಾಣ ಜಿಲ್ಲಾ ಕೇಂದ್ರ ರಚನೆ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳಿಂದ ತಹಸಿಲ್ ಕಚೇರಿ ಎದುರು ಸೋಮವಾರ ರಸ್ತೆ ತಡೆಯೊಂದಿಗೆ ಉಪವಾಸ ನಿರಶನ ನಡೆಸಲಾಯಿತು.
ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮಾತನಾಡಿ, ಹುಲಸೂರು ತಾಲೂಕು ಹೋರಾಟದ ಕಿಚ್ಚು ಎರಡು ದಶಕಗಳಿಂದ ಹೊತ್ತಿಕೊಂಡಿದೆ. ಅದರ ಪರಿಣಾಮ ನಮ್ಮ ಬಿಜೆಪಿ ಸರ್ಕಾರದಲ್ಲಿ ನೂತನ ತಾಲೂಕು ಘೋಷಿಸಲಾಯಿತು. ಆದರೆ ಕಳೆದ ೨೦ ತಿಂಗಳಿಂದ ಜನರ ಹಕ್ಕು ಕಸಿಯುವ ಕೆಲಸ ಸಚಿವ ಈಶ್ವರ ಖಂಡ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಬ್ಬ ಹೋರಾಟಗಾರ ಪತ್ರಿಕೆ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದರೂ ಸ್ಪಂದಿಸುವ ಗುಣ ಸಚಿವರಲ್ಲಿಲ್ಲ. ಯಾವ ಪುರುಷಾರ್ಥಕ್ಕೆ ಮಂತ್ರಿಯಾಗಿದ್ದೀರಿ? ಕೂಡಲೇ ಭಾಲ್ಕಿ ತಾಲೂಕಿನ ೧೬ ಹಳ್ಳಿಗಳನ್ನು ಸೇರಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅನ್ಯಾಯ ಆದವರಿಗೆ ನ್ಯಾಯ ಕೊಡಿಸುವ ಕೆಲಸ ನಮ್ಮದು. ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ಅಮಾಯಕರಿಗೆ ಅನ್ಯಾಯವಾಗುತ್ತಿದೆ. ಹುಲಸೂರು ತಾಲೂಕಿಗೆ ಆದಷ್ಟು ಬೇಗ ಹಳ್ಳಿಗಳನ್ನು ಸೇರಿ ಪಹಣಿ ಪತ್ರಿಕೆಯಲ್ಲಿ ನಮೂದಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಮಾತನಾಡಿ, ರಾಜೋಳೆ ತಮ್ಮ ಜೀವನವನ್ನೇ ತಾಲೂಕು ರಚನೆ ಹೋರಾಟದಲ್ಲಿ ತೊಡಗಿಸಿಕೊಂಡಿದ್ದು, ಈಗ ಆತ್ಮಹತ್ಯೆ ಮಾಡಿಕೊಳ್ಳದೆ ಕಾನೂನು ಮೂಲಕ ಹೋರಾಟ ನಡೆಸಬೇಕು. ತಾಲೂಕು ಅಭಿವೃದ್ಧಿಗೆ ಜನಪ್ರತಿನಿಧಿಗಳು ಪಕ್ಷಪಾತ ಮಾಡದೆ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಕೋರಿದರು.
ಹುಲಸೂರು ತಾಲೂಕು ಮತ್ತು ಬಸವಕಲ್ಯಾಣ ಜಿಲ್ಲಾ ಕೇಂದ್ರ ರಚನೆ ಹೋರಾಟ ಸಮಿತಿ ಸಂಚಾಲಕ ಎಂ.ಜಿ. ರಾಜೋಳೆ ಮಾತನಾಡಿ, ಎಂ.ಬಿ.ಪ್ರಕಾಶ ಆಯೋಗದ ಶಿಫಾರಸಿನಂತೆ ೬೨ ಹಳ್ಳಿಗಳ ೨೦ ಗ್ರಾಪಂ ಹುಲಸೂರು ತಾಲೂಕಿಗೆ ಸೇರಿಸಬೇಕು. ಮಿನಿ ವಿಧಾನಸೌಧ, ತಾಲೂಕು ನ್ಯಾಯಾಲಯ ಕೆಲಸ ಪ್ರಾರಂಭಿಸಬೇಕು. ಗ್ರಾಪಂ ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿ ಅಥವಾ ಪುರಸಭೆಯಾಗಿಸಬೇಕು ಎಂದು ಆಗ್ರಹಿಸಿದರು.
ಜಿಪಂ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಮಾಜಿ ಸದಸ್ಯ ಸುಧೀರ ಕಾಡಾದಿ, ನಾಗನಾಥ ಬಗದುರೆ, ಗ್ರಾಪಂ ಸದಸ್ಯ ನಾಗೇಶ ಮೇತ್ರೆ, ಬಸವ ಕೇಂದ್ರದ ತಾಲೂಕು ಅಧ್ಯಕ್ಷ ಆಕಾಶ ಖಂಡಾಳೆ, ರೂಪವತಿ ಜಾಧವ್, ಜೆಡಿಎಸ್ ಬಸವಕಲ್ಯಾಣ ತಾಲೂಕು ಅಧ್ಯಕ್ಷ ಶಬ್ಬೀರ್ ಪಾಶಾ ಮಾತನಾಡಿದರು.
ಸಹಾಯಕ ಆಯುಕ್ತ ಮುಕುಲ್ ಜೈನ್, ತಹಸೀಲ್ದಾರ್ ಶಿವಾನಂದ ಮೇತ್ರೆ, ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡ, ಸಿಪಿಐಗಳಾದ ಅಲಿಸಾಬ್, ಶ್ರೀನಿವಾಸ ಅಲ್ಲಾಪುರ, ಕೃಷ್ಣಕುಮಾರ ಪಾಟೀಲ, ಜಿ.ಎಂ. ಪಾಟೀಲ, ಗ್ರಾಪಂ ಸದಸ್ಯರಾದ ಜಗನ್ನಾಥ ದೇಟ್ನೆ, ಸಂತೋಷ ಗಾಯಕವಾಡ, ಪಿಕೆಪಿಎಸ್ ನಿರ್ದೇಶಕರಾದ ಭಾಗವತ ಜಾನಬಾ, ಪ್ರವೀಣ ಕಾಡಾದಿ, ಬಸವರಾಜ ಚೌರೆ, ಅನೀಲ ಹೀರು, ಪ್ರಮುಖರಾದ ಚಂದ್ರಕಾಂತ ದೇಟ್ನೆ, ಸಂಜು ಸುಗೂರೆ, ಸೋಮನಾಥ ನಂದಗೆ, ಅರವಿಂದ ಹರಪಲ್ಲೆ, ನವನಾಥ ಪಾಟೀಲ, ಶಿವರಾಜ ಕೌಟೆ, ಜಗನ್ನಾಥ ಬಿ., ಸತೀಶ ಹಿರೇಮಠ ಇತರರಿದ್ದರು. ಪಟ್ಟಣದ ವ್ಯಾಪಾರಸ್ಥರು ಸ್ವಯಂಪ್ರೇರಿತ ಅಂಗಡಿಗಳನ್ನು ಬಂದ್ ಮಾಡಿ ಹೋರಾಟಕ್ಕೆ ಸಾಥ್ ನೀಡಿದರು.
ಇಸಂಪಲ್ಲಿ ದೇಗುಲದಿಂದ ಮೆರವಣಿಗೆ: ಇಸಂಪಲ್ಲಿ ಭವಾನಿ ದೇವಾಲಯದಿಂದ ಶುರುವಾದ ಪ್ರತಿಭಟನಾ ಮೆರವಣಿಗೆ ಲಕ್ಷ್ಮೀ ಚೌಕ್, ಗಾಂಧಿ ವೃತ್ತದಿಂದ ಭಾಲ್ಕಿ-ಬಸವಕಲ್ಯಾಣ ಮುಖ್ಯರಸ್ತೆ ಮೂಲಕ ತಹಸಿಲï ಕಚೇರಿವರೆಗೆ ನಡೆಯಿತು. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಲಾಯಿತು. ಸ್ಥಳಕ್ಕೆ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಸೂರ್ಯಕಾಂತ ಶೀಲವಂತ ಮುಖಾಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿಪತ್ರ ಸಲ್ಲಿಸಲಾಯಿತು.