

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಿಐಟಿಯು ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಿಐಟಿಯು ಜಿಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ದುಡಿಯವ ಮಹಿಳೆಯರಿಗೆ ಕನಿಷ್ಠ ವೇತನ ಜಾರಿ, ಕೆಲಸದ ಸ್ಥಳಗಳಲ್ಲಿ ಸೂಕ್ತ ರಕ್ಷಣೆ ಹಾಗೂ ಜಸ್ಟಿಸ್ ವರ್ಮಾ ಸಮಿತಿಯ ಶಿಫಾರಸು ಜಾರಿ ಮಾಡುವಂತೆ ಒತ್ತಾಯಿಸಿದರು.
ದೇಶದಲ್ಲಿ ಪುರುಷ ಕಾರ್ಮಿಕರು, ಮಕ್ಕಳು-ಮಹಿಳೆಯರು ಮೇಲೆ ಒಂದಲ್ಲ ಒಂದು ರೀತಿಯ ದೌರ್ಜನ್ಯ, ಕ್ರೂರಹಿಂಸೆ ಹೆಚ್ಚುತ್ತಿವೆ. ಸಮಾಜ ಹಾಗೂ ಕೆಲಸ ಮಾಡುವ ಕಡೆ ಮಹಿಳೆಯರ ವಿರುದ್ಧ ನಡೆಯಬಾರದ ಕೃತ್ಯ ನಡೆಯುತ್ತಿವೆ. ಇಂಥ ತಾರತಮ್ಯ ಮತ್ತು ಹಿಂಸೆಯನ್ನು ತಕ್ಷಣವೇ ನಿಲ್ಲಿಸಿ, ರಕ್ಷಣೆ ನೀಡುವಂತೆ ಆಗ್ರಹಿಸಿದರು.
ಪಶ್ಚಿಮ ಬಂಗಾಳದಲ್ಲಿ ತರಬೇತಿ ವೈದ್ಯೆ ಮೇಲೆ ಅತ್ಯಾಚಾರ, ಕೊಲೆ, ಮಹಾರಾಷ್ಟ್ರದ ಬದ್ಲಾಪುರ ಠಾಣೆಯಲ್ಲಿ 4 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ, ಯುಪಿಯಲ್ಲಿ ನರ್ಸ್ ಮೇಲೆ ಅತ್ಯಾಚಾರ ಮತ್ತು ಹತ್ಯೆ, ಹೀಗೆ ದೇಶದ ವಿವಿಧೆಡೆ ತಲೆ ತಗ್ಗಿಸುವ ಕೃತ್ಯಗಳು ನಡೆಯುತ್ತಿವೆ. ಇದು ನಿಜಕ್ಕೂ ಆತಂಕಕಾರಿ, ಕೂಡಲೇ ಇದು ನಿಲ್ಲಬೇಕು ಎಂದು ಮನವಿ ಮಾಡಿದರು.
ಇಂಥ ನೀಚ ಘಟನೆಗಳು, ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿ ತೋರಿಸುತ್ತಿವೆ. ದೇಶದ ಕಾನೂನು ಮತ್ತು ಆಡಳಿತ ವ್ಯವಸ್ಥೆಯ ಲೋಪಗಳನ್ನು ಬಯಲು ಮಾಡಿವೆ. ಆದರೂ ಅತ್ಯಾಚಾರದಂತಹ ಘೋರ ಘಟನೆಗಳಿಗೆ ಕೆಲ ರಾಜ್ಯ ಸರ್ಕಾರಗಳು, ಆಡಳಿತ ಪಕ್ಷದವರು ಬೆಂಬಲ ನೀಡುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.
ಇಂದಿಗೂ ಸರ್ವಕಾಲಿಕ ಅಪರಾಧಿಗಳಾಗಿರುವ ಸ್ವಯಂಘೋಷಿತ ದೇವಮಾನವರು ಆಡಳಿತ ಪಕ್ಷದಿಂದ ಆಶ್ರಯ ಪಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಮಹಿಳೆಯರು ಎದುರಿಸುತ್ತಿರುವ, ಅನುಭವಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸಲು ಪ್ರಸ್ತುತ ಕಾನೂನು ಮತ್ತು ಆಡಳಿತ ವ್ಯವಸ್ಥೆ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದರು.
ಮಹಿಳೆಯರ ಮೇಲಿನ ಸಾಮಾಜಿಕ ಪೂರ್ವಾಗ್ರಹಗಳು ಮತ್ತು ತಾರತಮ್ಯ ಮನೋಭಾವವನ್ನು ಬಲಪಡಿಸುತ್ತವೆ. ಆದ್ದರಿಂದ ಕೂಡಲೇ ಸರ್ಕಾರ ಮಹಿಳೆಯರ ರಕ್ಷಣೆಗೆ ಮುಂದಾಗಬೇಕು ಎಂದರು.
ಪ್ರತಿಭಟನೆಯಲ್ಲಿ ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಸೌಮ್ಯ, ಅಂಗನವಾಡಿ ನೌಕರರ ಸಂಘಟನೆಯ ಕೆ.ಪಿ.ವೀಣಾ, ಜಿ.ಪಿ.ಶೈಲಾ, ಶಾರದ, ನಾಜೀಯಾ, ಬಿಸಿಯೂಟ ಸಂಘಟನೆಯ ಕಸ್ತೂರಿ, ಮೀನಾಕ್ಷಿ, ಸಂಜೀವಿನಿ ಸಂಘದ ಅಶ್ವಥಾ,ಹಸೀನಾ ಇದ್ದರು.