

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ನೌಕರ ಸಂಘಟನೆಗಳ ಸದಸ್ಯರು ಇಂದಿನಿಂದ ಜ.25 ರ ವರೆಗೆ ಜಿಲ್ಲೆಯ ಸಂಸದರು ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಆರಂಭಿಸಿದ್ದಾರೆ.
ಬೆಲೆ ಏರಿಕೆ, ಕಾರ್ಮಿಕ ಹಕ್ಕುಗಳ ರಕ್ಷಣೆ, ಸಂವಿಧಾನ ಮೌಲ್ಯಗಳ ರಕ್ಷಣೆ, ರೈತ ವಿರೋಧಿ ಕೃಷಿ ಕಾನೂನುಗಳ ವಾಪಸ್, ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತ್ರಿ ಜಾರಿ, ಕಾರ್ಮಿಕರಿಗೆ ಕನಿಷ್ಠ ವೇತನ 31 ಸಾವಿರ ನೀಡಿಕೆ, ಅಂಗನವಾಡಿ, ಗ್ರಾಪಂ., ಬಿಸಿಯೂಟ ಯೋಜನೆ, ಪ್ಲಾಂಟೇಷನ್, ಆಸ್ಪತ್ರೆ, ಹಾಸ್ಟೆಲ್, ಕೈಗಾರಿಕೆ ಕಾರ್ಮಿಕರ ಹಲವು ಬೇಡಿಕೆಗಳಿದ್ದು, ಎಲ್ಲವನ್ನೂ ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಹಾಗೆಯೇ ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಪಡಿಸಿ ಕಾಯಂಗೊಳಿಸಬೇಕು. ನಿರುದ್ಯೋಗ ಮತ್ತು ಖಾಸಗೀಕರಣ ನೀತಿ ಕೈ ಬಿಡಬೇಕು ಎಂದು ನೌಕರರು, ಕಾರ್ಮಿಕರು ಆಗ್ರಹಿಸಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರ 10 ವರ್ಷಗಳ ಆಡಳಿತ ಪೂರೈಸಿ ಮತ್ತೊಂದು ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದೆ. 10 ವರ್ಷಗಳಲ್ಲಿ ಜನರಿಗೆ ಒಳ್ಳೆಯ ದಿನ ಬರಲಿವೆ ಎನ್ನುವ ಭರವಸೆಯು ಮರೀಚಿಕೆಯಾಗಿಯೇ ಉಳಿದಿದೆ. ದೇಶದ ಸಾಲ 205 ಲಕ್ಷ ಕೋಟಿಗಳಿಗೆ ಏರಿದೆ, ಶ್ರೀಮಂತರ 15 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಯಿತೇ ಹೊರತು, ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡದೆ, ಅವರ ಮೇಲಿನ ಸಾಲದ ಹೊರೆ ಇಳಿಸದೆ ಲಕ್ಷಗಟ್ಟಲೆ ರೈತರನ್ನು ಆತ್ಮಹತ್ಯೆಗೆ ದೂಡಲಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ತನ್ನ ವೈಫಲ್ಯ ಮರೆಮಾಚಿ, ದೇಶದ ಬಹುಸಂಖ್ಯಾತ ಜನರಲ್ಲಿ ಕೋಮುದ್ವೇಷ ತುಂಬಿ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಜನರಲ್ಲಿ ಭಕ್ತಿಯ ಉನ್ಮಾದ ಮತ್ತು ಭಯದ ಆತಂಕದಲ್ಲಿರಿಸುವ ಅಪಾಯಕಾರಿ ರಾಜಕೀಯದಲ್ಲಿ ಕೋಮುವಾದಿ ಮತ್ತು ಸಂವಿಧಾನ ವಿರೋಧಿ ಶಕ್ತಿಗಳು ನಿರತವಾಗಿದೆ. ರಾಜ್ಯ ಸರ್ಕಾರವೂ ದುಡಿಯುವ ಜನರ ಮೇಲೆ ಮತ್ತಷ್ಟು ಸಂಕಷ್ಟ ಹೇರುತ್ತಿದೆ. ಕಾರ್ಮಿಕರ ಕನಿಷ್ಟ ವೇತನ ಹೆಚ್ಚಿಸಲು ಮತ್ತು ರೈತರ ಬೆಳೆಗಳಿಗೆ ವೈಜ್ಞಾನಿಕ ಕನಿಷ್ಟ ಬೆಂಬೆಲ ಬೆಲೆ ನಿಗದಿಪಡಿಸಲು ಮುಂದಾಗುತ್ತಿಲ್ಲ. ಉದ್ಯೋಗ ಸೃಷ್ಟಿಸಲು ಹಾಗೂ ಬೆಲೆ ಏರಿಕೆ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ದುಡಿಯುವ ವರ್ಗಗಳ ಹಿತಕಾಯಲು ಆಳುವ ಸರ್ಕಾರಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಜಿಲ್ಲಾ ಕಾರ್ಯದರ್ಶಿ ಅರವಿಂದ್, ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಜಯಂತಿ, ಪ್ಲಾಂಟೇಷನ್ ಕಾರ್ಮಿಕರ ಸಂಘದ ಕಾರ್ಯದರ್ಶಿ ಸೌಮ್ಯ, ಗ್ರಾ.ಪಂ.ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಜಿಲ್ಲಾ ಖಜಾಂಚಿ ಕಲಾವತಿ ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು.