ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಸ್ ಎಫ್ ಐ ಪ್ರತಿಭಟನೆ

21
Published on

ಮೈಸೂರು: ಡಿಜಿಟಲ್ ಅಂಕಪಟ್ಟಿ ಬದಲು ಮುದ್ರಿತ ಅಂಕಪಟ್ಟಿ ನೀಡಬೇಕು. ಹಾಸ್ಟೆಲ್‌ಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ)ನಿಂದ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದ ಮುಂಭಾಗ ಸೋಮವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಅಂಕಪಟ್ಟಿ ಶುಲ್ಕವನ್ನು ಪರೀಕ್ಷಾ ಶುಲ್ಕದೊಂದಿಗೆ ಪಡೆದುಕೊಳ್ಳಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸಿಗುತ್ತಿಲ್ಲ. ವಿವಿ ಆಡಳಿತ ಕಚೇರಿಯಲ್ಲಿ ಅಂಕಪಟ್ಟಿಯ ಬಗ್ಗೆ ಕೇಳಿದರೆ ಅಂಕಪಟ್ಟಿ ಮುದ್ರಿಸಲು ವಿವಿಯಲ್ಲಿ ಹಣವಿಲ್ಲ, ನೀವು ಡಿಜಿಟಲ್ ಲಾಕರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿರೆಂದು ಹೇಳುತ್ತಾರೆ. ಆದರೆ ಡಿಜಿ ಲಾಕರ್‌ನಲ್ಲಿ ಯಾವುದೇ ಅಂಕಪಟ್ಟಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಹಲವು ವಿದ್ಯಾರ್ಥಿಗಳು ಅಂಕಪಟ್ಟಿ ಇಲ್ಲದೆ ವಿದ್ಯಾರ್ಥಿ ವೇತನವನ್ನೂ ಪಡೆಯಲು ಆಗುತ್ತಿಲ್ಲ. ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಹಾಗೂ ಉದ್ಯೋಗಕ್ಕೆ ಸೇರಲು ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಕಡ್ಡಾಯವಾಗಿ ಬೇಕು. ಹೀಗಾಗಿ, ಕೂಡಲೇ ಅಂಕಪಟ್ಟಿ ನೀಡಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿಗಳು ವಿವಿಯ ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳಾ ಹಾಸ್ಟೆಲ್‌ಗಳಂತೂ ಬಹುತೇಕ ಶಿಥಿಲಗೊಂಡಿವೆ. ಸರಿಯಾದ ಕಿಟಕಿ ಸಹ ಇಲ್ಲದ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ. ಹೀಗಾಗಿ, ಶಿಥಿಲಗೊಂಡಿರುವ ಹಾಸ್ಟೆಲ್ ಕೊಠಡಿಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯಲು ಹೊರ ರಾಜ್ಯ, ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ವಿವಿಯ ಪ್ರತಿಯೊಂದು ವಿಭಾಗದಲ್ಲಿ ಒಂದಲ್ಲ ಒಂದು ಸಮಸ್ಯೆಗಳಿವೆ. ಗುಣಮಟ್ಟದ ಆಹಾರ ನೀಡಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು. ಎಲ್ಲ ಪದವೀಧರರಿಗೆ ಮುದ್ರಿತ ಅಂಕಪಟ್ಟಿ ನೀಡಬೇಕು, ಮಹಾರಾಜ ಕಾಲೇಜಿನ ಕ್ರಿಮಿನಾಲಜಿ ಆ್ಯಂಡ್ ಫೋರೆನ್ಸಿಕ್ ಸೈನ್ಸ್ ಅಂತಿಮ ವರ್ಷದ ವಿದ್ಯಾರ್ಥಿಗಳ 2ನೇ ಸೆಮಿಸ್ಟರ್ ಫಲಿತಾಂಶ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕುಲಸಚಿವರ ಕಚೇರಿಗೆ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ವಿಜಯಕುಮಾರ್, ಸಮಿತಿ ಸದಸ್ಯೆ ಕವನಾ, ವಿದ್ಯಾರ್ಥಿ ಮುಖಂಡರಾದ ಮನು, ಕಾವ್ಯಾ, ಪೂಜಾ, ಶಿಬಿನ್, ರೆಹಮಾನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net