

ನೆಲಮಂಗಲ: ಉಪವಿಭಾಗ ವ್ಯಾಪ್ತಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರ ೆಬ್ರವರಿಯಿಂದ ಇದುವರೆಗೂ ನಡೆದಿದ್ದ ಮನೆಗಳವು, ದರೋಡೆ ಸೇರಿ ವಿವಿಧ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು 1.08 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಸಮೇತ ಹಲವು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಗರ ಠಾಣೆ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಲಯ ಪೊಲೀಸ್ ಮಹಾನಿರ್ದೇಶಕ ಎಂ. ಚಂದ್ರಶೇಖರ್ ಈ ಮಾಹಿತಿ ನೀಡಿದರು.
ಉಪವಿಭಾಗದ ವ್ಯಾಪ್ತಿಯ ನೆಲಮಂಗಲ ನಗರ, ಗ್ರಾಮಾಂತರ, ದಾಬಸ್‌ಪೇಟೆ, ತ್ಯಾಮಗೊಂಡ್ಲು, ಮಾದನಾಯನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 37 ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ 51 ಮಂದಿಯನ್ನು ಬಂಧಿಸಲಾಗಿದೆ. ಪ್ರಮುಖ ಕಳ್ಳತನ ಪ್ರಕರಣದಡಿ ಕಲಬುರಗಿ ಮೂಲದ ಮನೆಗಳ್ಳತನ ತಂಡದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುತ್ತಗಿ ಗ್ರಾಮದ ಕಲ್ಯಾಣ್ (27), ಬಸವರಾಜು (28), ದೊಡ್ಡಬಳ್ಳಾಪುರ ತಾಲೂಕಿನ ಗೌಡನಹಳ್ಳಿಯ ಉಷಾ ಎಂಬುವವರು ಬಂಧಿತರು ಎಂದರು.
ಕಲ್ಯಾಣ್ ಎಂಬಾತ ರಾಜ್ಯದ ಕೆಲ ಠಾಣೆಯಲ್ಲಿ 52 ಮನೆಗಳ್ಳತನ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಬಂಧಿತರಿಂದ 8.72 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 2.5 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಅಡಕೆ ವ್ಯಾಪಾರಿಯ ಸುಲಿಗೆ: ತಮಿಳುನಾಡು ಮೂಲಕ ಮಣಿಕಂಠ ಎಂಬುವವರು ಅಡಕೆ ಮಾರಿ ಮರಳುತ್ತಿದ್ದಾಗ ತುಮಕೂರಿನ ರೌಡಿಶೀಟರ್ ಮಧುಕುಮಾರ್ ಮತ್ತು ಆತನ ಸಹಚರರಾದ ಗಜೇಂದ್ರ, ನಾಗೇಂದ್ರ, ಸುನಿಲ್, ಸೋಮಶೇಖರ್ ಮತ್ತು ಸತೀಶ್ ಅವರು ಮಣಿಕಂಠನನ್ನು ಹೆದರಿಸಿ 5 ಲಕ್ಷ ರೂ. ನಗದು ಹಾಗೂ 32 ಗ್ರಾಂ ಚಿನ್ನದ ಸರ ದರೋಡೆ ಮಾಡಿದ್ದರು. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಆರೋಪಿ ಬ್ಯಾಟರಿ ಜಯಂತ್ ವಿರುದ್ಧ ವಿವಿಧ ಠಾಣೆಯಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳಿವೆ. ಆತನ ಸಹಚರರಾದ ಗಿರಿ, ಗುರು ಜತೆ ಸೇರಿಕೊಂಡು ಸುಲಿಗೆ, ಕಳ್ಳತನ, ದರೋಡೆ ಮಾಡುತ್ತಿದ್ದರು. ಅವರನ್ನು ಬಂಧಿಸಲಾಗಿದೆ ಎಂದು ಎಂ.ಚಂದ್ರಶೇಖರ್ ಹೇಳಿದರು.
ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ: ಡಿವೈಎಸ್‌ಪಿ ಜಗದೀಶ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಹರೀಶ್, ಬಿ.ಎಸ್. ಮಂಜುನಾಥ್ ನೇತೃತ್ವದಲ್ಲಿ ಎಸ್‌ಐಗಳಾದ ಎಚ್.ಟಿ. ವಸಂತ್, ಎನ್. ಸುರೇಶ್, ದಾಳೇಗೌಡ, ಮೋಹನ್‌ಕುಮಾರ್, ಡಿ.ಆರ್. ಮಂಜುನಾಥ್ ಎಎಸ್‌ಐ ಶಂಕರಲಿಂಗಯ್ಯ, ಪೇದೆಗಳಾದ ಶಶಿಕುಮಾರ್, ಶಿವಕುಮಾರ್, ಶ್ರೀಧರ್, ರಂಗನಾಥ್, ಮಹದೇವ ಹಾದಿಮನಿ, ರಾಜೇಂದ್ರ, ದಿನೇಶ್, ಎಂ. ಪ್ರಸನ್ನ, ರಾಘವೇಂದ್ರ ಬಾಬು, ಕೆಂಪಣ್ಣ, ರವಿಕುಮಾರ್, ಜೈಪ್ರಕಾಶ್, ಶ್ರೀನಿವಾಸ್ ಅವರನ್ನು ಒಳಗೊಂಡ ತಂಡ 37 ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ. ತಂಡವನ್ನು ಕೇಂದ್ರ ವಲಯ ಪೊಲೀಸ್ ಮಹಾನಿರ್ದೇಶಕ ಅಭಿನಂದನಾ ಪತ್ರ ಹಾಗೂ ನಗದು ಬಹುಮಾನ ಕೊಟ್ಟು ಶ್ಲಾಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಅಪರ ಜಿಲ್ಲಾ ವರಿಷ್ಠಾಧಿಕಾರಿ ಕೆ.ಲಕ್ಷ್ಮೀಗಣೇಶ್, ಡಿವೈಎಸ್‌ಪಿ ಜಗದೀಶ್, ಇನ್‌ಸ್ಪೆಕ್ಟರ್‌ಗಳಾದ ಹರೀಶ್, ಬಿ.ಎಸ್. ಮಂಜುನಾಥ್ ಎಸ್‌ಐ ಎಚ್.ಟಿ. ವಸಂತ್, ಎನ್. ಸುರೇಶ್, ದಾಳೇಗೌಡ, ಮೋಹನ್‌ಕುಮಾರ್, ಡಿ.ಆರ್. ಮಂಜುನಾಥ್ ಇದ್ದರು.
ಕರೊನಾ ಹಿನ್ನೆಲೆಯಲ್ಲಿ ಇಲಾಖೆಯ ಶೇ.99 ಸಿಬ್ಬಂದಿ ಲಸಿಕೆ ಪಡೆದುಕೊಂಡಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಶೇ.1 ಸಿಬ್ಬಂದಿ ಲಸಿಕೆ ಪಡೆದಿಲ್ಲ. ಸೋಂಕಿತರಾಗಿರುವ ಸಿಬ್ಬಂದಿಗೆ ಸಂಪೂರ್ಣ ವೈದ್ಯಕೀಯ ಭತ್ಯೆ ಇಲಾಖೆಯಿಂದ ಭರಿಸಲಾಗುತ್ತಿದೆ. ಸೋಂಕಿನಿಂದ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ 30 ಲಕ್ಷ ರೂ. ಸಹಾಯಧನ ಹಾಗೂ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಲಾಗುವುದು. ಎಂ.ಚಂದ್ರಶೇಖರ್, ಕೇಂದ್ರ ವಲಯದ ಐಜಿಪಿ