ವಿವಿಧ ಪಕ್ಷಗಳ ಮುಖಂಡರು ಬಿಜೆಪಿಗೆ : ಸ್ವಯಂಪ್ರೇರಿತ ನಡೆಗೆ ಸಿಪಿವೈ ಸ್ವಾಗತ

1
Published on

ಚನ್ನಪಟ್ಟಣ: ಇಪ್ಪತ್ತು ವರ್ಷಗಳಿಂದ ತಾಲೂಕಿನ ಅಭಿವೃದ್ಧಿ ಹಾಗೂ ನೀರಾವರಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಈ ವಿಚಾರಗಳನ್ನು ಅರಿತು ಇಂದು ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ನನ್ನ ಕೈಬಲಪಡಿಸಲು ಸ್ವಯಂಪ್ರೇರಿತರಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಿಳಿಸಿದರು.

ತಾಲೂಕಿನ ಬೇವೂರು ಗ್ರಾಮದಲ್ಲಿ ಭಾನುವಾರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನ ಅಭಿವೃದ್ಧಿಗಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ನೀರಾವರಿ ಯೋಜನೆ ತರಲು ನನ್ನ ಶ್ರಮ ಏನೆಂದು ಎಲ್ಲರಿಗೂ ತಿಳಿದಿದೆ. ಇದನ್ನು ಗಮನಿಸಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ ಎಂದರು.

ಹಿಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ, ತಾಲೂಕಿನ ಅಭಿವೃದ್ಧಿಯಾಗುತ್ತದೆ ಎಂಬ ಕಾರಣಕ್ಕೆ ತಾಲೂಕಿನ ಜನತೆ ಅವರನ್ನು ಪಕ್ಷಾತೀತವಾಗಿ ಬೆಂಬಲಿಸಿದರು. ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳ ನಡುವೆಯೂ ಅವರನ್ನು ಕೈಹಿಡಿದರು. ಆದರೆ, ಜನರ ನಿರೀಕ್ಷೆ ಸುಳ್ಳಾಗಿದೆ. ತಾಲೂಕಿನ ಅಭಿವೃದ್ಧಿಯಲ್ಲಿ ಅವರು ಸೋತಿದ್ದಾರೆ. ಈ ಕಾರಣಕ್ಕಾಗಿ ಜೆಡಿಎಸ್‌ನ ವೈಫಲ್ಯದಿಂದ ಸಾಕಷ್ಟು ಕಾರ್ಯಕರ್ತರು ಹಾಗೂ ಮುಖಂಡರು ಜೆಡಿಎಸ್‌ನಿಂದ ಹೊರಬರುತ್ತಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಸಾವಿರಾರು ಮಂದಿ ಬಿಜೆಪಿ ಸೇರಲಿದ್ದಾರೆ ಎಂದರು.

ಪ್ರತಿಹಳ್ಳಿಯಲ್ಲೂ ಕರೆಯುತ್ತಾರೆ: ತಾಲೂಕಿನ ಜನತೆ ಕುಮಾರಸ್ವಾಮಿ ಅವರನ್ನು ಒಪ್ಪಿ ನೀಡಿದ ಅಧಿಕಾರ ಬಳಸಿಕೊಂಡಿಲ್ಲ ಹಾಗೂ ಜನರ ಆಶೋತ್ತರಗಳಿಗೆ ಸ್ಪಂದಿಸಿಲ್ಲ ಹಾಗಾಗಿ ಪ್ರತಿಹಳ್ಳಿ ಹಳ್ಳಿಯಲ್ಲೂ ಜನತೆ ನನ್ನನ್ನು ಬೆಂಬಲಿಸುವ ಮನಸ್ಸು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ ಎಂದರು.

ಮುಂದಿನ ಅವಧಿಗೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ತಾಲೂಕಿನ ಜನತೆಯ ಆಶೀರ್ವಾದದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ತಾಲೂಕಿನ ಜನ ನನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಎಲ್ಲರ ಜೊತೆಗೂಡಿ ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಸಿಪಿವೈ ಭರವಸೆ ನೀಡಿದರು.

ಕಮಲ ಹಿಡಿದ ದಳ ಮುಖಂಡರು: ಬೇವೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಹಾಗೂ ರೈತಸಂದ ಮುಖಂಡರು ಬಿಜೆಪಿ ಸೇರ್ಪಡೆಯಾದರು. ತಾಪಂ ವಾಜಿ ಸದಸ್ಯೆ ವಿಜಿಯಮ್ಮ, ಜೆಡಿಎಸ್ ಹಿರಿಯ ಮುಖಂಡರಾದ ಬಿ.ಕೆ.ರಾಮಯ್ಯ, ವಿಜೇಂದ್ರ, ನೇಗಿಲು ಹಿಡಿದ ರೈತಸಂದ ಮುಖಂಡ ಕೃಷ್ಣ, ವಿಎಸ್ಸೆಸ್ಸೆನ್ಸ ಮಾಜಿ ನಿರ್ದೇಶಕ ಸಿದ್ದರಾಜು, ನಿವೃತ್ತ ಉಪಪ್ರಾಂಶುಪಾಲ ತೊರೆಹೊಸೂರು ರಂಗಸ್ವಾಮಿ, ಸಿದ್ದರಾಮೇಶ್ವರ ವಿದ್ಯಾಸಂಸ್ಥೆ ವಾಜಿ ಕಾರ್ಯದರ್ಶಿ ಮೋಹನ್ ಸೇರಿ ಹಲವು ಮಂದಿ ಕಮಲ ಹಿಡಿದರು.

ಜಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಂ, ನಗರಾಧ್ಯಕ್ಷ ಶಿವಕುವಾರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಂಪುರ ಮಲವೇಗೌಡ, ತಾಪಂ ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಲೆಕೇರಿ ರವೀಶ್, ನಗರಸಭಾ ಸದಸ್ಯ ಕೋಟೆ ಚಂದ್ರು, ಬೇವೂರು ಜಿಪಂ ಬಿಜೆಪಿ ಮುಖಂಡರಾದ ವಿಜಿಕುವಾರ್, ಮಧುಸೂದನ್, ಪುಟ್ಟಸ್ವಾಮಿ, ಸುನೀಲ್, ಗೌಡಗೆರೆ ಗಂಗಾಧರ್, ಕೆಂಚೇಗೌಡ ಸೇರಿ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net