

ಶಿರಹಟ್ಟಿ: ಜನವರಿಯಲ್ಲಿ ಬರಲಿರುವ ವಿವಿಧ ಜಯಂತ್ಯುತ್ಸವ, ಗಣರಾಜ್ಯೋತ್ಸವ ಆಚರಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಮಾಜದ ಮುಖಂಡರು ಮತ್ತು ತಾಲೂಕಾಡಳಿತ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು.
ಶಿವಯೋಗಿ ಸಿದ್ದರಾಮ, ಮಹಾಯೋಗಿ ಮೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಮತ್ತು ಗಣರಾಜ್ಯೋತ್ಸವ ಆಚರಿಸುವ ಕುರಿತು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಯಂತಿಗಳನ್ನು ಆಚರಿಸುವ ಮೂಲಕ ಆ ವ್ಯಕ್ತಿಯ ಕೊಡುಗೆಗಳು, ಸಾಧನೆಗಳು ಮತ್ತು ಅವರ ತತ್ವ ಸಿದ್ಧಾಂತಗಳನ್ನು ನೆನಪಿಸಿಕೊಳ್ಳುತ್ತೇವೆ. ಅವರ ಜೀವನ ಕಥೆಗಳು ನಮಗೆ ಪ್ರೇರಣೆ ನೀಡುತ್ತವೆ. ಮಹಾನ್ ವ್ಯಕ್ತಿಗಳ ಜೀವನ ಅರಿಯುವುದರಿಂದ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ ಎಂದರು.
ರಾಜ್ಯ ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ವಿವಿಧ ಜಯಂತಿ ಆಚರಿಸುವುದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಒಂದು ಮಾರ್ಗವಾಗಿದೆ. ಇದು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಸಮಾಜದಲ್ಲಿ ಏಕತೆ ಮತ್ತು ಸಹೋದರತ್ವ ಭಾವನೆ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಎಚ್. ದೇವಗಿರಿ, ರಾಮಪ್ಪ ಗಿರಿಯಪ್ಪ ಸಿದ್ದಣ್ಣವರ, ವಿವಿಧ ಸಮಾಜ ಮುಖಂಡರು ಮತ್ತು ವಿವಿಧ ಇಲಾಖೆಗಳ ತಾಲೂಕು ಅಧಿಕಾರಗಳು ಉಪಸ್ಥಿತರಿದ್ದರು.