

ಶಹಾಬಾದ್: ತಾಲೂಕು ಆಡಳಿತ ಹಾಗೂ ವಿವಿಧ ಸಂಘ-ಸAಸ್ಥೆ ಸಹಯೋಗದಡಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನ.1ರಂದು ನಾಡದೇವಿ ಭಾವಚಿತ್ರದ ಭವ್ಯ ಮೆರವಣಿಗೆ, ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲು ತಹಸೀಲ್ದಾರ್ ಜಗದೀಶ ಚೌರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆ ನಿರ್ಧರಿಸಿತು. ಬೆಳಗ್ಗೆ 9ಕ್ಕೆ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಿಂದ ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು, ವಿವಿಧ ಸಂಘಟನೆ, ಸಂಘ-ಸAಸ್ಥೆ ಪದಾಧಿಕಾರಿಗಳು, ಸಾರ್ವಜನಿಕರೊಂದಿಗೆ ನಾಡದೇವಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಚೌರ ಹೇಳಿದರು. ಗ್ರೇಡ್-2 ತಹಸೀಲ್ದಾರ್ ಗುರುರಾಜ ಸಂಗಾವಿ, ಪೌರಾಯುಕ್ತ ಡಾ.ಕೆ. ಗುರುಲಿಂಗಪ್ಪ, ಜೆಸ್ಕಾಂ ಎಇಇ ಮಹೇಶ, ಡಾ.ಮಾರುತಿ, ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ, ಕರವೇ ಸಂಘಟನೆಗಳ ಅಧ್ಯಕ್ಷರಾದ ಯಲ್ಲಾಲಿಂಗ ಹೈಯಾಳಕರ್, ವಿಶ್ವರಾಜ ಫೀರೋಜಾಬಾದ್ ಇತರರಿದ್ದರು.