ಮೈಸೂರು: ಸಾಹಿತ್ಯ ನಮ್ಮ ಸಾಮಾಜಿಕ ರಚನೆಯನ್ನು ಗಾಢವಾಗಿ ಪ್ರಭಾವಿಸುತ್ತಿರುವ ರಾಜಕೀಯ, ಧರ್ಮ ಹಾಗೂ ವಿಜ್ಞಾನದಂತಹ ವಲಯಗಳೊಡನೆ ಸೃಜನಶೀಲವಾಗಿ ಮುಖಾಮುಖಿಯಾಗುವ ಅಗತ್ಯವಿದೆ. ಇದು ಕನ್ನಡ ಮತ್ತು ಕರ್ನಾಟಕವನ್ನು ಕಟ್ಟುವ ಕ್ರಮವೂ ಹೌದು ಎಂದು ಚಿಂತಕ ಡಾ.ನರಹಳ್ಳಿ ಬಾಲಸುಬ್ರಮಣ್ಯ ಹೇಳಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಬೆಂಗಳೂರಿನ ಅಭಿನವ ಸಂಸ್ಥೆಯ ಸಹಯೋಗದಲ್ಲಿ ವಿವೇಕಾನಂದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಕನ್ನಡವೆಂದರೆ ಬರಿನುಡಿಯಲ್ಲ, ಅದಕಿದೆ ವಿಜ್ಞಾನದ ಸ್ಪರ್ಶ’ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ- ತಂತ್ರಜ್ಞಾನ ಬದುಕಿನಲ್ಲಿ ಅನೇಕ ಕ್ರಾಂತಿಕಾರಕ ಬದಲಾವಣೆ ತಂದಿದೆ. ಅನೇಕ ಸವಲತ್ತು ಒದಗಿಸಿಕೊಟ್ಟಿದೆ. ಬೆರಳ ತುದಿಯಲ್ಲಿ ಜಗತ್ತಿನ ದರ್ಶನವಾಗುತ್ತದೆ. ಇದೆಲ್ಲವನ್ನೂ ನಾವು ಬಳಸಿಕೊಳ್ಳುತ್ತಿದ್ದು, ಇದಕ್ಕೆ ಮೊಬೈಲ್‌ಗಿಂತ ಮತ್ತೊಂದು ನಿದರ್ಶನ ಬೇಕಿಲ್ಲ ಎಂದರು.
ನಾವು ಬದುಕುತ್ತಿರುವುದೇ ಜಾಗತೀಕರಣ ಹಾಗೂ ತಂತ್ರಜ್ಞಾನದ ಯುಗದಲ್ಲಿ. ಇದರ ಪರಿಣಾಮವೆಂದರೆ ಎಲ್ಲ ವಲಯಗಳ ಪಲ್ಲಟಗಳನ್ನೂ ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕು. ಅರ್ಥ ವ್ಯವಸ್ಥೆಯಲ್ಲಾಗುವ ಅಲ್ಲೋಲ ಕಲ್ಲೋಲ, ಜೀವನಶೈಲಿಯಲ್ಲಾಗುವ ಬದಲಾವಣೆ, ರೂಢಿಯ ನಂಬಿಕೆ ಅಸ್ತವ್ಯಸ್ತಗೊಳಿಸುವ ಆಧುನಿಕ ಪ್ರಗತಿಯ ವಿದ್ಯಮಾನಗಳು, ಪ್ರಕೃತಿಯ ಮೇಲಾಗುತ್ತಿರುವ ಹಲ್ಲೆ, ಮಾನವ ಸಂಬಂಧಗಳ ಮೇಲಾಗುತ್ತಿರುವ ಆಘಾತಗಳು-ಇವೆಲ್ಲವೂ ನಮ್ಮ ಬದುಕಿನ ಸಹಜ ಲಯವನ್ನು ಅಸ್ತವ್ಯಸ್ತಗೊಳಿಸುತ್ತಿವೆ.
ರಸೆಲ್ ಹೇಳುವಂತೆ ನಮ್ಮ ಕಾಲದಲ್ಲಿ ತಂತ್ರಜ್ಞಾನ ಸ್ವತಂತ್ರ ಅಸ್ತಿತ್ವ ಪಡೆದ ಶಾಸ್ತ್ರವಲ್ಲ; ಅದು ಜನರ ಮೇಲೆ ಸವಾರಿ ಮಾಡುತ್ತಿರುವ ಯಜಮಾನಿಕೆಯ ಶಕ್ತಿ. ಈ ಹೊತ್ತಿನಲ್ಲಿ ತಂತ್ರಜ್ಞಾನದ ಅನುಕೂಲ ಹಾಗೂ ಅಪಾಯಗಳನ್ನು ಚರ್ಚಿಸುವುದು ನಮ್ಮ ಕಾಲದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜವಾಬ್ದಾರಿ ಎಂದರು.
ಭಾರತೀಯ ಜ್ಞಾನ ಪರಂಪರೆ ಗಮನಿಸಿದರೆ ಸಾಹಿತ್ಯಕ್ಕೆ ಇದ್ದಷ್ಟೇ ಪ್ರಾಶಸ್ತ್ಯ ವಿಜ್ಞಾನಕ್ಕೂ ಇದೆ. ಗಣಿತ, ಖಗೋಳ ವಿಜ್ಞಾನ, ಆಯುರ್ವೇದ ಮುಂತಾದ ಜ್ಞಾನ ಶಾಖೆಗಳನ್ನು ನಾವು ನಿದರ್ಶನಕ್ಕಾಗಿ ಗಮನಿಸಬಹುದು. ಅದರಲ್ಲೂ ದಶಮೂಲ ಪದ್ಧತಿ ಜಗತ್ತಿಗೆ ಭಾರತ ನೀಡಿದ ಬಹುದೊಡ್ಡ ಕೊಡುಗೆ. ಅಂತೆಯೇ ಸೊನ್ನೆಯ ಪರಿಕಲ್ಪನೆ. ನಮ್ಮ ಅಧ್ಯಯನ ಕ್ರಮದಲ್ಲಿ ಒಂದು ರೀತಿಯ ಸಮಗ್ರತೆ ಇತ್ತು. ಆದರೆ, ಬರಬರುತ್ತಾ ನಮ್ಮ ಅಧ್ಯಯನದ ಕ್ರಮ ಬಿಡಿಯಾದ ನೆಲೆಯಲ್ಲಿ ನಡೆಯುತ್ತಿದೆಯೇ ಹೊರತು, ಇಂಡಿಯಾದ ಪರಿಕಲ್ಪನೆಯಿಂದ ದೂರ ಸರಿದಂತೆ ಕಾಣುತ್ತದೆ ಎಂದರು.
ವಿಶೇಷ ನೈಪುಣ್ಯತೆಯ ನೆಲೆಯಲ್ಲಿ ಆಳಕ್ಕೆ ಇಳಿಯುತ್ತಾ ಹೋಗಿ ವಿಸ್ತಾರವನ್ನು ಕಳೆದುಕೊಂಡಿತೇ? ಅನ್ಯಜ್ಞಾನ ಶಿಸ್ತುಗಳ ಜತೆ ಅನುಸಂಧಾನ ಕಡಿಮೆಯಾಯಿತೇ? ಇಂದು ಮಾನವ ಸಂಬಂಧಗಳಂತೆಯೇ ಜ್ಞಾನ ಶಾಖೆಗಳೂ ದ್ವೀಪಗಳಾಗುತ್ತಿವೆಯೇ? ಇಂತಹ ಪ್ರಶ್ನೆಗಳಿಗೆ ಮುಖಾಮುಖಿಯಾಗಬೇಕಾಗಿದೆ ಎಂದು ಕರೆಕೊಟ್ಟರು.
ವಿಜ್ಞಾನ ಮತ್ತು ಸಾಹಿತ್ಯ ಪರಸ್ಪರ ವಿರೋಧವೆಂಬ ರೂಢಿಯ ನಂಬುಗೆ ಅರ್ಥವಿಲ್ಲದ್ದು. ಸಾಹಿತ್ಯ ಭಾವ ಜಗತ್ತಿಗೆ ಸಂಬಂಧಪಟ್ಟದ್ದು, ವಿಜ್ಞಾನ ಭಾವ ಜಗತ್ತಿಗೆ ಸಂಬಂಧಪಟ್ಟದ್ದು ಎಂಬುದು ನಿಜವಾದರೂ, ಇವುಗಳ ನಡುವೆ ಅರ್ಥಪೂರ್ಣ ಸಂಬಂಧವಿದೆ ಎಂದು ಹೇಳಿದರು.
ಮೌಢ್ಯವನ್ನು ತೊಡೆದು ಹಾಕಿ ನವ ಸಮಾಜ ನಿರ್ಮಾಣಕ್ಕೆ ಕಾರಣವಾಗಿ ಕ್ರಾಂತಿಕಾರಕ ಬದಲಾವಣೆಯನ್ನು ತಂದ ವಿಜ್ಞಾನದ ಬಗ್ಗೆ ಕುವೆಂಪು ಅವರಿಗೆ ಅಪಾರ ಮೆಚ್ಚುಗೆ ಇತ್ತು. ವಿಜ್ಞಾನಿಗಳಿಗೆ ಸಾಹಿತ್ಯಿಕ ಸಂಸ್ಕೃತಿ ಗೊತ್ತಿರುವುದಿಲ್ಲ. ಸಾಹಿತಿಗಳಿಗೆ ವೈಜ್ಞಾನಿಕ ಸಂಸ್ಕೃತಿ ತಿಳಿದಿರುವುದಿಲ್ಲ. ಲೋಕದ ಹಲವು ಸಮಸ್ಯೆಗಳು ಪರಿಹಾರಗೊಳ್ಳದೇ ಇರುವುದಕ್ಕೆ ಈ ಬಿರುಕೇ ಕಾರಣ ಎನ್ನುವುದು ಸ್ನೋನ ವಾದ ಎಂದು ಬೇಸರ ವ್ಯಕ್ತಪಡಿಸಿದರು.
ಮಾನವಿಕ ಹಾಗೂ ವಿಜ್ಞಾನ ವಿಷಯದ ಅಧ್ಯಯನಗಳು ಪರಸ್ಪರ ಪೂರಕವಾದಂತಹವುಗಳು. ಮಾನವ ಕುಲಕ್ಕೆ ಈ ಎಲ್ಲದರ ಅಗತ್ಯವೂ ಇದೆ. ಆದರೆ, ಈಗ ನಮ್ಮ ಅಧ್ಯಯನ ಕ್ರಮದಲ್ಲಿ ಮಾನವಿಕ ವಿಷಯಗಳು ಹಿಂದೆ ಸರಿದು ವಿಜ್ಞಾನ ವಿಷಯಗಳಿಗೆ ಪ್ರಾಧಾನ್ಯತೆ ದೊರಕುತ್ತಿದೆ.
ಅದರಲ್ಲೂ ಮೂಲ ವಿಜ್ಞಾನಕ್ಕಿಂತ ತಂತ್ರಜ್ಞಾನಕ್ಕೆ ಆದ್ಯತೆ ಇದೆ. ಈ ಬೆಳವಣಿಗೆಯ ಬಗ್ಗೆಯೂ ಸಂವೇದನಾಶೀಲ ಮನಸ್ಸು ಚಿಂತಿಸುವ ಅಗತ್ಯವಿದೆ. ವಿಜ್ಞಾನವೆಂದರೆ ನಿರಂತರ ಬದಲಾವಣೆ. ಜನರಿಗೆ ಸ್ಥಿರತೆ ಮತ್ತು ಬದಲಾವಣೆಯನ್ನು ಹೊಂದಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಅದರಲ್ಲೂ ಅವರ ಆಚಾರ ವಿಚಾರ ತಿರಸ್ಕರಿಸಿದಾಗ ನಮ್ಮ ಮತ ಧರ್ಮಗಳು, ನಮ್ಮ ನಂಬಿಕೆಗಳು, ವಿಶ್ವಾಸಗಳು ನಮಗೆ ನಿತ್ಯದ ಚಟುವಟಿಕೆಯಂತೆ ಅಭ್ಯಾಸವಾಗಿಬಿಟ್ಟಿರುತ್ತದೆ ಎಂದರು.
ಬಳಸಿ ಬಿಸಾಕು ಎಂಬುದು ಆಧುನಿಕತೆ ಒದಗಿಸಿಕೊಟ್ಟಿರುವ ಮತ್ತೊಂದು ಸವಲತ್ತು. ಇದು ನಮಗೆ ಅನೇಕ ಬಗೆಯಲ್ಲಿ ಅನುಕೂಲ ಒದಗಿಸಿಕೊಟ್ಟಿದೆ ಎಂಬುದು ನಿಜ. ಆದರೆ, ಅಪ್ಪ, ಅಮ್ಮ, ಅಣ್ಣ, ತಂಗಿ, ಹೆಂಡತಿ, ಗಂಡ, ಗೆಳೆಯ ಈ ನೆಲೆಯಲ್ಲೂ ಬಳಸಿ ಬಿಸಾಕುವ ಭಾವನೆ ಬಲಗೊಂಡಂತೆ ಕಾಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮೊಬೈಲ್ ಅನೇಕ ಅನುಕೂಲ ಕಲ್ಪಿಸಿದ್ದರೂ ಮಾನವ ಸಂಘಜೀವಿ ಎಂಬ ಮೂಲ ತತ್ವವನ್ನೇ ಪಲ್ಲಟಗೊಳಿಸಿಬಿಟ್ಟಿದೆ. ಮನುಷ್ಯ ಸಂಬಂಧಗಳೇ ಅರ್ಥಹೀನವಾಗುತ್ತಿವೆ. ಸಂದೇಶಗಳೇ ಸಂಬಂಧ ಸಾಧನವಾಗಿವೆಯೇ ಹೊರತು ಮುಖತಃ ಭೇಟಿಯಾಗಲಿ, ಪರಸ್ಪರ ಒಡನಾಟವಾಗಲಿ ದೂರವಾಗುವುದರ ಮೂಲಕ ಸಾಂಘಿಕ ಬದುಕಿನ ಸಂತಸದಿಂದ ಮನುಷ್ಯ ವಂಚಿತನಾಗುತ್ತಿರುವ ಸಂದರ್ಭ ಸೃಷ್ಟಿಯಾಗುತ್ತಿದೆ ಎಂದರು.
ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ ಟಿ.ವಿಜಯಲಕ್ಷ್ಮೀ ಮುರಳೀಧರ್ ಮಾತನಾಡಿ, ಸಾಕ್ಷಿ ನುಡಿ ನಡೆಸಿಕೊಟ್ಟು, ಜಗತ್ತಿನಲ್ಲಿ ಯಾವ ಭಾಷೆಯಲ್ಲೂ ಇರದ ವೈಜ್ಞಾನಿಕ ನೆಲೆ, ಹಿನ್ನೆಲೆ ಕನ್ನಡ ಭಾಷೆಗೆ ಇದೆ. ಮೂಲ ಕಾವ್ಯ ಇರುವುದು ಕನ್ನಡ ಭಾಷೆಯಲ್ಲಿ ಎಂದರು.
ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ತಂತ್ರಜ್ಞಾನದ ಮಧ್ಯೆ ಕನ್ನಡ ಮತ್ತು ಭಾವದ ಜಗತ್ತನ್ನು ಹೇಗೆ ಉಳಿಸಬೇಕು ಎಂಬ ಬಗ್ಗೆ ವೈಜ್ಞಾನಿಕವಾಗಿ ಚಿಂತನೆ ನಡೆಸಬೇಕಿದೆ ಎಂದರು.
ಬೆಂಗಳೂರಿನ ಅಭಿನವದ ನ.ರವಿಕುಮಾರ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ, ಸಹ ಕನ್ನಡ ಪ್ರಾಧ್ಯಾಪಕಿ ಡಾ.ವಿನೋದಮ್ಮ, ಡಾ.ಎಸ್.ಆರ್.ರಮೇಶ್, ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾರ್ಯ ಇತರರಿದ್ದರು.