

ಹಾಸನ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಗ್ರಾಮೀಣ ಕೈಗಾರಿಕಾ ವಿಭಾಗ ಇವರ ವತಿಯಿಂದ ನಗರದ ಕೆಐಎಡಿಬಿ ಕಚೇರಿಯಲ್ಲಿ ಬುಧವಾರ ಸ್ವಾವಲಂಬಿ ಬದುಕಿಗೆ ಫಲಾನುಭವಿಗಳಿಗೆ ವಿವಿಧ ಉಪಕರಣಗಳನ್ನು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ವಿತರಿಸಿದರು.
ನಂತರ ಮಾತನಾಡಿದ ಅವರು, ಕೈಗಾರಿಕಾ ಪ್ರದೇಶಕ್ಕೆ ಈ ಭಾಗದ ಹಲವು ರೈತರು ತಮ್ಮ ಕೃಷಿ ಜಮೀನನ್ನು ನೀಡಿದ್ದಾರೆ. ಜಮೀನು ಕಳೆದುಕೊಂಡು ಇಂದು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರು ಕೂಡ ಇಂತಹ ಸಮಸ್ಯೆ ಎದುರಿಸುತ್ತಿದ್ದು ಅದನ್ನು ನಿವಾರಿಸುವ ನಿಟ್ಟಿನಲ್ಲಿ ಮಹಿಳೆಯರ ಸ್ವಯಂ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಒಲಿಗೆ ಯಂತ್ರ ವಿತರಿಸಲಾಗುತ್ತಿದೆ ಎಂದರು.
ಮಹಿಳೆಯರ ಸ್ವಾವಲಂಬಿ ಬದುಕಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಕೂಡ ಸ್ವಯಂ ಉದ್ಯೋಗದ ಜತೆಗೆ ವಿವಿಧ ಇಲಾಖೆಗಳಲ್ಲಿ ಕೂಡ ಹಲವು ಕಾರ್ಯಕ್ರಮಗಳು ಮಹಿಳೆಯರಿಗೆ ಮೀಸಲಿವೆ. ಅವುಗಳನ್ನು ಅವರು ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿಯಲ್ಲೂ ಕೂಡ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿ ಕೊಡಲು ಹಲವು ಯೋಜನೆಗಳು ಇವೆ. ಗಾರೆ ಉಪಕರಣಗಳು, ಮರ ಕೆಲಸದ ಉಪಕರಣಗಳು, ವಿದ್ಯುತ್ ಉಪಕರಣಗಳು ಸೇರಿದಂತೆ ವಿವಿಧ ಉಪಕರಣಗಳು ಲಭ್ಯವಿದೆ. ತಮ್ಮ ಇಚ್ಛೆಗೆ ಅನುಗುಣವಾಗಿ ತಮಗೆ ಇಷ್ಟವಾದ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಲು ಬೇಕಾದ ಉಪಕರಣಗಳನ್ನು ಪಡೆಯಬಹುದು ಎಂದು ಮಾಹಿತಿ ನೀಡಿದರು.
ಈ ವೇಳೆ ಕೈಗಾರಿಕೆ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.