ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂರಿಂದ ಚಾಲನೆ

08 HANUR 3 (1)
????????????????????????????????????
Published on

ಹನೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹನೂರಿಗೆ ಅಗಮಿಸುತ್ತಿರುವುದರಿಂದ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.


ಮುಖ್ಯಮಂತ್ರಿಗಳ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.


ಜಿಲ್ಲೆಯ ಎಲ್ಲ ತಾಲೂಕಿನ 332 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ 1,497 ಕೋಟಿ ರೂ. ವೆಚ್ಚದಲ್ಲಿ ಡಿಪಿಅರ್ ಸಿದ್ಧಪಡಿಸಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. 192 ಕೋಟಿ ರೂ. ವೆಚ್ಚದಲ್ಲಿ 98 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಜತೆಗೆ ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಲಿದೆ. ಕಾರ್ಯಕ್ರಮಕ್ಕೆ ತಾಲೂಕಿನಿಂದ 110 ಬಸ್ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಹೆಚ್ಚು ಜನರು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.


ಗೊಂದಲ ಪರಿಹರಿಸಿ: ಸಭೆಯಲ್ಲಿ ತಾಲೂಕಿನ ಡಿ.ಎಂ ಸಮುದ್ರ (ಗುಳ್ಯ) ಗ್ರಾಮದ ಕಾರ್ಯಕರ್ತನೊಬ್ಬ ಮಾತನಾಡಿ, ಬಿಜೆಪಿಯಲ್ಲಿ ಬಣ ರಾಜಕೀಯವಿದೆ. ಹಾಗಾಗಿ ಕಾರ್ಯಕರ್ತರಲ್ಲಿ ಗೊಂದಲವಿದೆ. ಇದರಿಂದ ಪಕ್ಷ ಸಂಘಟನೆಗೆ ತೊಂದರೆಯಾಗಿದೆ. ಆದ್ದರಿಂದ ಈ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಹನೂರಿಗೆ ಸಿಎಂ ಬಂದು ಹೋದ ಮೇಲೆ ನಾನು ಒಂದು ವಾರ ಚಾ.ನಗರ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಲಿದ್ದು, ಇದರಲ್ಲಿ 3 ದಿನ ಹನೂರಿನಲ್ಲಿದ್ದು ಸಮಸ್ಯೆ ಬಗೆಹರಿಸಲಾಗುವುದು. ಅಂತಿಮ ತೀರ್ಮಾನವನ್ನು ಹೈಕಮಾಂಡ್‌ಗೆ ತೆಗೆದುಕೊಳ್ಳಲಿದೆ ಎಂದರು.


ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸುಂದರ್, ಉಪಾಧ್ಯಕ್ಷ ಡಾ.ಎಸ್ ದತ್ತೇಶ್‌ಕುಮಾರ್, ಪಕ್ಷದ ರಾಜ್ಯ ಕಾರ್ಯಕರಿಣಿ ಸದಸ್ಯ ಬಿ.ವೆಂಕಟೇಶ್, ಚಾಮುಲ್ ಅಧ್ಯಕ್ಷ ನಾಗೇಂದ್ರ, ಎಸ್ಟಿ ಮೋರ್ಚ ಜಿಲ್ಲಾಧ್ಯಕ್ಷ ಜಯಸುಂದರ್, ಹನೂರು ಮಂಡಲಾಧ್ಯಕ್ಷ ಸಿದ್ದಪ್ಪ, ಮುಖಂಡರಾದ ಡಾ.ಪ್ರೀತನ್ ನಾಗಪ್ಪ, ನಿಶಾಂತ್, ವೀರಭದ್ರಸ್ವಾಮಿ, ಬಸವರಾಜು ಇತರರು ಉಪಸ್ಥಿತರಿದ್ದರು.

ಹನೂರಿನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಚಿವ ವಿ. ಸೋಮಣ್ಣ ಮಾತನಾಡಿದರು. ಶಾಸಕ ಎನ್.ಮಹೇಶ್, ಪ್ರೀತನ್ ನಾಗಪ್ಪ, ಸುಂದರ್, ದತ್ತೇಶ್‌ಕುಮಾರ್, ವೆಂಕಟೇಶ್, ನಿಶಾಂತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net