ವಿವಿಧ ಅನುದಾನದಡಿ ಅಭಿವೃದ್ಧಿಗೆ ವೇಗ, ಸಚಿವ ಎಂಟಿಬಿ ನಾಗರಾಜ್ ಹೇಳಿಕೆ, ಹಲವು ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಚಾಲನೆ

1
Published on

ಬೆಂಗಳೂರು ಗ್ರಾಮಾಂತರ: ವಿಧಾನ ಪರಿಷತ್ ಸದಸ್ಯರ ಅನುದಾನ, ಸರ್ಕಾರದ ವಿಶೇಷ ಅನುದಾನದಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲಾಗಿದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಹೊಸಕೋಟೆ ತಾಲೂಕಿನ ಮಂಚಪ್ಪನಹಳ್ಳಿ, ಮೈಲಾಪುರ, ಎಂ.ಹೊಸಹಳ್ಳಿ, ಉಮ್ಮುಲು ಗ್ರಾಮಗಳಲ್ಲಿ ಸೋಮವಾರ ವಿಧಾನಪರಿಷತ್ ಪರಿಷತ್ ಸದಸ್ಯರ ಅನುದಾನದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ನನ್ನ ಕರ್ಮ ಭೂಮಿಯೆಂದೇ ಭಾವಿಸಿರುವ ಹೊಸಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಮುಂದೆಯೂ ಮುಂದುವರಿಸುತ್ತೇನೆ. ಇದಕ್ಕೆ ಜನರ ಆಶೀರ್ವಾದ ಮುಖ್ಯ ಎಂದರು.

ಸುಳ್ಳುಭರವಸೆಯನ್ನು ನಂಬಲ್ಲ: ಚುನಾವಣೆ ವೇಳೆ ಸುಳ್ಳು ಭರವಸೆ ನೀಡಿ ಮತದಾರರ ದಿಕ್ಕು ತಪ್ಪಿಸಿ ಅಧಿಕಾರ ಹಿಡಿದರೂ ಜನ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ. ಚುನಾವಣೆ ವೇಳೆಯಷ್ಟೆ ರಾಜಕೀಯ ಮಾಡಬೇಕು ಆಮೇಲೆ ಏನಿದ್ದರೂ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ನೀಡಬೇಕು ಎಂದ ಸಚಿವರು ತಿಳಿಸಿದರು.

ಅಧಿಕಾರ ಇಲ್ಲದಾಗಲೂ ಸಹ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದೆ. ಜನರ ಅಹವಾಲು ಸ್ವೀಕರಿಸಿ ಅಧಿಕಾರಿಗಳ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೆ. ಅಧಿಕಾರಿಗಳೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಬಿಡುವುದಿಲ್ಲ. ಕಾಮಗಾರಿಗೆ ಚಾಲನೆ ನೀಡಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಕಾಮಗಾರಿ ನಡೆಯುವ ವೇಳೆ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುತ್ತೇನೆ. ಲೋಪ ಕಂಡುಬಂದರೆ ಕೂಡಲೇ ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸುತ್ತೇನೆ ಎಂದರು.

ಚಾರಿಟಬಲ್ ಟ್ರಸ್ಟ್‌ನಿಂದ ನೆರವು: ಕರೊನಾ ವೇಳೆ ಸ್ವಂತ ಖರ್ಚಿನಲ್ಲಿ ಎಂಟಿಬಿ ಚಾರಿಟಬಲ್ನಿಂದ ಬಡವರಿಗೆ ಕೂಲಿ ಕಾರ್ಮಿಕರಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ದಿನಕಿ ಕಿಟ್ ವಿತರಿಸಿದ್ದೇನೆ. ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗೆ ವೈದ್ಯಕೀಯ ಪರಿಕರ ವಿತರಿಸಿದ್ದೇನೆ. ಅಭಿಯಾನದ ಮಾದರಿಯಲ್ಲಿ ಉಚಿತವಾಗಿ ವ್ಯಾಕ್ಸಿನ್ ವಿತರಣೆ ಹಮ್ಮಿಕೊಂಡಿದ್ದೇನೆ. ಮುಂದೆಯು ಸಹ ಟ್ರಸ್ಟ್ ಸಾಮಾಜಿಕ ಕೆಲಸಗಳನ್ನು ಮುಂದುವರಿಸಲಿದೆ ಎಂದು ಸಚಿವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net