

ಬಸವಕಲ್ಯಾಣ: ದೇಶದಲ್ಲಿ ಶಿಕ್ಷಣ ಪದ್ಧತಿ ಮುಕ್ತವಾಗಿರದ ಹೊತ್ತಿನಲ್ಲಿ ಅಕ್ಷರದ ಬೀಜ ಬಿತ್ತಿ, ಮಹಿಳಾ ವರ್ಗಕ್ಕೆ ಶಿಕ್ಷಣ ಕೊಡುವ ಮೂಲಕ ಭಾರತದ ಮೊದಲ ಶಿಕ್ಷಕಿ, ಮಾತೆ ಸಾವಿತ್ರಿಬಾಯಿ ಫುಲೆ ಅವರ ಹೆಸರನ್ನು ನಾಡಿನ ಒಂದು ವಿಶ್ವವಿದ್ಯಾಲಯಕ್ಕೆ ಇಡಬೇಕು ಎಂದು ಸಾಹಿತಿ, ಚಿಂತಕಿ ಡಾ.ಜಯದೇವಿ ಗಾಯಕವಾಡ ಹೇಳಿದರು.
ಜೀಜಾಮಾತಾ ಶಿಕ್ಷಣ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಶೈಕ್ಷಣಿಕ ಪ್ರಗತಿಗೆ ಅನನ್ಯ ಕೊಡುಗೆ ನೀಡಿದ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಕುಲಕ್ಕೆ ಸಾವಿತ್ರಿಬಾಯಿ ಫುಲೆ ಆದರ್ಶವಾಗಿದ್ದಾರೆ ಎಂದರು.
ಹಿರಿಯ ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ್ ಮಾತನಾಡಿ, ಮಹಾರಾಷ್ಟçದ ಹಲವು ಮಹಾತ್ಮ, ಚಿಂತಕರ, ಸಂತರ ಕೊಟ್ಟ ನೆಲ. ಸಾವಿತ್ರಿಬಾಯಿ ಫುಲೆ ಶಿಕ್ಷಣ ಜತೆಗೆ ಕಾವ್ಯ, ಅನುವಾದ, ಲೇಖನ ಬರೆದು ಸಮಾಜ ಎಚ್ಚರಿಸಿದ ಮಹಾತಾಯಿ ಎಂದರು.
ಸಂತ ಗಾಡಗೆ ಬಾಬಾ ಮಂಚದ ಪ್ರವರ್ತಕ ಸತೀಶ ಹಣೇಗಾವ ಮಾತನಾಡಿ. ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ದಯಾನಂದ ಸೂರ್ಯವಂಶಿ, ಉಪನ್ಯಾಸಕರ ಸಂಘದ ರಾಜ್ಯ ಕಾಯದರ್ಶಿ ನರಸಿಂಗರೆಡ್ಡಿ ಗದ್ಲೇಗಾಂವ, ನಿವೃತ್ತ ಶಿಕ್ಷಕ ಭಾನುದಾಸ ಪಾಟೀಲ್, ಶ್ರೀಪತಿ ಸಕರಾಮ ಮಾತನಾಡಿದರು.
ಮರಾಠಿ ಶಾಲೆ ಮುಖ್ಯಗುರು ಬಾಲಾಜಿ ಬಿರಾದಾರ, ಕನ್ನಡ ಮಾಧ್ಯಮ ಪ್ರೌಡ ಶಾಲೆಯ ಪ್ರತಾಪ ಸೂರ್ಯವಂಶಿ, ಪ್ರಕಾಶ ದಾಡಗೆ ಇತರರಿದ್ದರು.