

ದಾವಣಗೆರೆ: ರಾಜ್ಯದ ವಿಶ್ವವಿದ್ಯಾನಿಲಯ ಒಂದಕ್ಕೆ ಹಾಸ್ಯನಟ ದಿ.ನರಸಿಂಹರಾಜು ಅವರ ಹೆಸರನ್ನು ನಾಮಕರಣ ಮಾಡಲು ಸರ್ಕಾರದ ಮೇಲೆ ಒತ್ತಡ ತರುವುದಾಗಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಅಖಿಲ ಕರ್ನಾಟಕ ಸರ್ವಜ್ಞ ಸಾಂಸ್ಕೃತಿಕ ಕಲಾವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಾಸ್ಯ ಚಕ್ರವರ್ತಿ ದಿ. ನರಸಿಂಹರಾಜು ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇವಲ 56 ವರ್ಷ ಕಾಲ ಬದುಕಿದ್ದರೂ ಶತಮಾನಕ್ಕೆ ಉಳಿಯಬಹುದಾದ ಹಾಸ್ಯವನ್ನು ನರಸಿಂಹರಾಜು ಉಣಬಡಿಸಿದ್ದಾರೆ. ಈ ಮೇರುನಟನ ಹೆಸರುಳಿಸಲು ಸರ್ಕಾರ, ವಿಶ್ವವಿದ್ಯಾನಿಲಯಕ್ಕೆ ನರಸಿಂಹರಾಜು ಅವರ ಹೆಸರಿಡಲು ಕ್ರಮ ವಹಿಸಬೇಕೆಂದರು.
ನರಸಿಂಹರಾಜು ಮತ್ತು ಬಾಲಕೃಷ್ಣ ಇಬ್ಬರೂ ಕನ್ನಡ ಚಿತ್ರರಂಗ ಕಂಡ ಮಹಾನ್ ಕಲಾಪ್ರತಿಭೆಗಳು. ಅಭಿಮಾನಿಗಳಿಗೆ ಹಾಸ್ಯದ ರಸದೌತಣ ಬಡಿಸಿದವರು. ನರಸಿಂಹರಾಜು ವಾಮನನಂತಿದ್ದರೂ ಹಾವಭಾವಗಳಿಂದಲೇ ವೀಕ್ಷಕರನ್ನು ತಮ್ಮೆಡೆಗೆ ಸೆಳೆದು ಸಹಜ ಹಾಸ್ಯದ ಅಲೆಯಲ್ಲಿ ತೇಲಿಸುತ್ತಿದ್ದರು. ಹಾಗಾಗಿಯೇ ಅವರು ದೈಹಿಕವಾಗಿ ನಮ್ಮಿಂದ ದೂರವಿದ್ದರೂ ಮಾನಸಿಕವಾಗಿ ಅಜರಾಮರವಾಗಿ ಉಳಿದಿದ್ದಾರೆ ಎಂದರು.
ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ನರಸಿಂಹರಾಜು ಹಾಗೂ ಬಾಲಕೃಷ್ಣರಂತಹ ಹಾಸ್ಯ ಕಲಾವಿದರು ಸಿಗುವುದು ಅತಿ ವಿರಳ. ಅವರೆಂದಿಗೂ ಪ್ರಶಸ್ತಿ ಬೆನ್ನತ್ತಿ ಹೋಗಲಿಲ್ಲ. ಅವೇ ಅವರ ಮನೆಬಾಗಿಲಿಗೆ ಬರುತ್ತಿದ್ದವು. ಅವರು ಆಸ್ತಿ ಮಾಡಲಿಲ್ಲ. ವೀಕ್ಷಕರು, ಅಭಿಮಾನಿಗಳನ್ನೇ ಆಸ್ತಿಯಾಗಿಸಿಕೊಂಡರು ಎಂದು ಹೊಗಳಿದರು.
ಉಪನ್ಯಾಸ ನೀಡಿದ ನಟ, ಸಾಹಿತಿ ಡಾ. ಎಚ್. ಚಿಕ್ಕಹೆಜ್ಜಾಜಿ ಮಹದೇವ್, ವಿಶ್ವದ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸರ್ವಜ್ಞನ ವಚನಗಳಲ್ಲಿ ಪರಿಹಾರವಿದೆ. ಮಕ್ಕಳು ಅವನ್ನು ಓದಲು ಪಾಲಕರು ಸಲಹೆ ನೀಡಬೇಕು ಎಂದು ತಿಳಿಸಿದರು.
ಡಾ. ರಾಜಕುಮಾರ್ ಅಭಿನಯಿಸಿದ ಚಿತ್ರಗಳಲ್ಲಿ ನರಸಿಂಹರಾಜು ಇರುತ್ತಿದ್ದರು. ನಿರ್ಮಾಪಕರು ಮೊದಲು ಅವರ ಡೇಟ್ ಪಡೆದುಕೊಳ್ಳುತ್ತಿದ್ದರು. ಮನುಷ್ಯನಲ್ಲಿ ಎಷ್ಟೇ ಕಷ್ಟವಿದ್ದರೂ ನಗುತ್ತಿರಬೇಕೆಂಬುದನ್ನು ಎಂಬುದನ್ನು ಈ ದಿಗ್ಗಜ ಕಲಿಸಿಕೊಟ್ಟಿದ್ದಾರೆ ಎಂದರು.
ಚಿತ್ರದುರ್ಗದ ಬಳ್ಳೆಕಟ್ಟೆಯ ಕುಂಬಾರ ಗುರುಪೀಠದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಹಾಗೂ ಶ್ರೀ ವೈಷ್ಣವಿ ಆದಿಶಕ್ತಿ ಸೇವಾ ಟ್ರಸ್ಟ್‌ನ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜೂನಿಯರ್ ನರಸಿಂಹರಾಜು, ಮಡಿಕೇರಿಯ ನ್ಯಾಯಾಧೀಶೆ ರೇಣುಕಾಂಬ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಾಹಿತಿ ಡಾ. ಎಂ. ಮಂಜುನಾಥ್, ಕೆ.ವೈ. ತಿಪ್ಪೇಸ್ವಾಮಿ ಇತರರಿದ್ದರು.
---