ವಿವಿಗಳ ಕಾರ್ಯಚಟುವಟಿಕೆಯೇ ಹಾಸ್ಯಾಸ್ಪ

22
Published on

ಮೈಸೂರು: ಕವಲು ದಾರಿಯಲ್ಲಿ ಸಾಗುತ್ತಿರುವ ಈಗಿನ ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆಯೇ ಹಾಸ್ಯಾಸ್ಪದ ಎನಿಸಿದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಕಳವಳ ವ್ಯಕ್ತಪಡಿಸಿದರು.


ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ, ಅಭಿನಂದನಾ ಸಮಿತಿ, ಸಂಶೋಧನಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಮಹಾರಾಜ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಬಿ.ಎನ್.ಯಶೋದಾ, ಆಡಳಿತಾಧಿಕಾರಿ ಡಾ.ಜಿ.ಎಚ್.ನಾಗರಾಜ್ ಅವರಿಗೆ ಬೀಳ್ಗೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಲು ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪನೆಗೆ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ಆದೇಶಿಸಿದೆ. ಆದರೆ, ಈ ವಿವಿಗಳ ಕಾರ್ಯಚಟುವಟಿಕೆಯೇ ಹಾಸ್ಯಾಸ್ಪದ ಎನ್ನುವಂತಾಗಿದೆ. ಎಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕೆಂಬ ನಿಯಮ ಇಲ್ಲ. ಅಲ್ಲದೇ, ಅನೇಕ ರೀತಿಯ ದುರುಪಯೋಗಳಾಗುತ್ತಿವೆ. ಸಿಂಡಿಕೇಟ್ ಸಭೆಗಳಲ್ಲಿ ಚರ್ಚೆಯಾಗುವ ಯಾವ ವಿಷಯಗಳೂ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು.


ಉನ್ನತ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಅನೇಕ ಕ್ರಮಗಳನ್ನು ವಹಿಸಿ ಶ್ರಮಿಸಲಾಗುತ್ತಿದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳೊಂದಿಗೆ ಸ್ಪರ್ಧಿಸುವ ಒಂದೂ ವಿಶ್ವವಿದ್ಯಾಲಯವೂ ದೇಶದಲಿಲ್ಲ. ವಿದೇಶದ ವಿವಿಗಳೊಂದಿಗೆ ಹೋಲಿಕೆ ಮಾಡುವ ಒಂದೂ ವಿವಿಗಳೂ ದೇಶದಲ್ಲಿ ಇಲ್ಲವಾಗಿವೆ ಎಂದು ಅಸಮಾಧಾನವ್ಯಕ್ತಪಡಿಸಿದರು.


ಪಿಎಚ್.ಡಿ ಮಾಡುವ ಸಂಶೋಧನಾ ವಿದ್ಯಾರ್ಥಿಗಳಿಗೆ ಜವಾಬ್ದಾರಿ ಇದೆ. ತಮ್ಮ ಇತಿಮಿತಿಯನ್ನು ನೋಡಿಕೊಂಡು ಹೋರಾಟ ಮಾಡಬೇಕು. ಬರೀ ಪ್ರಶ್ನೆ ಮಾಡುವುದು, ಆಡಳಿತದಲ್ಲಿ ಮೂಗು ತೂರಿಸಬಾರದು. ಸಮಸ್ಯೆಗಳಿದ್ದರೆ ಚುನಾಯಿತ ಪ್ರತಿನಿಧಿಗಳು ಮತ್ತು ಸಿಂಡಿಕೇಟ್ ಸದಸ್ಯರಿಗೆ ತಿಳಿಸಬೇಕು ಎಂದು ಕಿವಿಹಿಂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net