ವಿವಿ ಸಾಗರಕ್ಕೆ ಸಿಎಂ ಬಾಗಿನ ಸಮರ್ಪಣೆ 23ಕ್ಕೆ

Sudhakar
Published on

ಚಿತ್ರದುರ್ಗ: ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಜ. 23ರಂದು ಮಧ್ಯಾಹ್ನ 3ಕ್ಕೆ ಬಾಗಿನ ಸಮರ್ಪಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಗಿನ ಸಮರ್ಪಣೆಗೂ ಮುನ್ನ ಇಲ್ಲಿನ ಕಣಿವೆ ಮಾರಮ್ಮ ದೇವಿಯ ದರ್ಶನ ಪಡೆಯಲಿದ್ದಾರೆ. ಸಭಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆ ಸಂಬಂಧ ತುಮಕೂರು ಬ್ರಾಂಚ್ ಕೆನಾಲ್ ಅಡೆತಡೆ ನಿವಾರಣೆಯಾಗಿದ್ದು, ಮುಂದಿನ ಒಂದು ವರ್ಷದಲ್ಲಿ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಲು ವಿಶ್ವೇಶ್ವರಯ್ಯ ಜಲ ನಿಗಮ ಗುರಿ ಇಟ್ಟುಕೊಂಡಿದೆ ಎಂದು ಹೇಳಿದರು.

ರಾಜ್ಯದ ಜನರಿಂದ ಕೇಂದ್ರ ಸರ್ಕಾರಕ್ಕೆ 4.5 ಲಕ್ಷ ಕೋಟಿ ರೂ. ತೆರಿಗೆ ಪಾವತಿಯಾಗುತ್ತಿದೆ. ಅದರಲ್ಲಿ ಶೇ 13ರಷ್ಟು ಮಾತ್ರ ಅಭಿವೃದ್ಧಿ ಯೋಜನೆಗಳಿಗೆ ಹಿಂದಿರುಗಿಸುತ್ತಿದೆ. ಹೀಗಾಗಿ ಈ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿರುವ 5,300 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಬೇಕು. ಈ ನಿಟ್ಟಿನಲ್ಲಿ ಸಂಸದ ಗೋವಿಂದ ಎಂ. ಕಾರಜೋಳ ಅವರೂ ಸೇರಿ ಕರ್ನಾಟಕದ 28 ಸಂಸದರು ಪಕ್ಷಾತೀತವಾಗಿ ನಿಯೋಗ ಹೋಗಿ, ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಮಧ್ಯ ಕರ್ನಾಟಕ ಬಯಲುಸೀಮೆ ಬರಗಾಲಕ್ಕೆ ತುತ್ತಾಗಿದೆ. ಇಲ್ಲಿ ಯಾವುದೇ

ನೀರಾವರಿ, ಕೈಗಾರಿಕೆಗಳ ಸೌಲಭ್ಯಗಳಿಲ್ಲ. ಎಸ್ಸಿ, ಎಸ್ಟಿ, ಹಿಂದುಳಿದವರೇ ಹೆಚ್ಚಿದ್ದು, ಜನರು ಮತ್ತು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿಯಲ್ಲಿದೆ. ಇದಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ಅನುದಾನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಘೋಷಿಸಿರುವ ಉಚಿತ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದೆ. ಮೋದಿಯೇ ಗ್ಯಾರಂಟಿ ಎನ್ನುವ ಬಿಜೆಪಿಗರಿಗೆ ಈ ಜಿಲ್ಲೆಯ ಕುರಿತು ಕಾಳಜಿ ಇದ್ದರೆ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ತರಲಿ. ಇಲ್ಲದಿದ್ದರೆ, ನಾವು ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್‌ಪೀರ್, ಪದಾಧಿಕಾರಿಗಳಾದ ಕೆ.ಪಿ. ಸಂಪತ್‌ಕುಮಾರ್, ಡಿ.ಎನ್. ಮೈಲಾರಪ್ಪ, ಕೃಷ್ಣಮೂರ್ತಿ, ಅಂಜಿನಪ್ಪ, ಮುದಸಿರ್ ನವಾಜ್, ಅರ್ಪಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net