

ಚಿಂತಾಮಣಿ : ವಿವಾಹಿತೆಯನ್ನು ಕೊಲೆ ಮಾಡಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆಂಧ್ರ ಮೂಲದ ಆರೋಪಿಯನ್ನು ಬಟ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಎದ್ದುಲೋಳ್ಳಪಲ್ಲಿಯ ಕೆ.ಎನ್.ಶಂಕರ್ ಬಂಧಿತ. ಕೊಲೆಗೂ ಮೊದಲು ಬಾರ್‌ನಲ್ಲಿ ಕುಡಿದಿದ್ದ ಸಿಸಿಟಿವಿ ದೃಶ್ಯಗಳಿಂದ ಆರೋಪಿಯನ್ನು 2 ತಿಂಗಳ ನಂತರ ಬಂಧಿಸಲು ಸಾಧ್ಯವಾಯಿತು ಎಂದು ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಲಕ್ಷ್ಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏನಿದು ಪ್ರಕರಣ?: ಶೆಟ್ಟಿಹಳ್ಳಿಯಲ್ಲಿ ವಾಹನ ಚಾಲಕನಾಗಿದ್ದ ಶಂಕರ್ ಪತ್ನಿಯನ್ನು ತೊರೆದು ಕೋನಾಪುರದ ನರೇಶ್ ಎಂಬುವವರ ಮೊದಲ ಪತ್ನಿ ಶೋಭಾ ಅವರ ಜತೆ ಸ್ನೇಹ ಬೆಳೆಸಲು ಮುಂದಾಗಿದ್ದ. ಅ.19ರಂದು ಶೋಭಾ ಹಾಗೂ ನರೇಶ್‌ನ 2ನೇ ಪತ್ನಿ ಹೊಲದಲ್ಲಿ ನೆಲಗಡಲೆ ಕೀಳಲು ಹೋಗಿದ್ದರು. ಸಂಜೆಯಾಗುತ್ತಿದ್ದಂತೆ 2ನೇ ಪತ್ನಿ ಹಸುಗಳನ್ನು ಎಳೆದುಕೊಂಡು ಮನೆಗೆ ಹೋಗಿದ್ದರು. ಈ ವೇಳೆ ಕಂಠಪೂರ್ತಿ ಕುಡಿದು ಬಂದಿದ್ದ ಶಂಕರ್ ಶೋಭಾಳನ್ನು ಸಂಪರ್ಕ ಹೊಂದುವಂತೆ ಪೀಡಿಸಿದ್ದಾನೆ. ಆಕೆ ನಿರಾಕರಿಸಿದಾಗ ಕುತ್ತಿಗೆೆ ಬಿಗಿದು ಕೊಲೆ ಮಾಡಿ, ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ರಾತ್ರಿಯಾದರೂ ಶೋಭಾ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ನರೇಶ್ ಹೊಲದ ಬಳಿ ಹುಡುಕಿದಾಗ ಶವ ಪತ್ತೆಯಾಗಿತ್ತು.ಗ್ರಾಮಾಂತರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎನ್.ಶ್ರೀನಿವಾಸಪ್ಪ, ಬಟ್ಲಹಳ್ಳಿ ಠಾಣೆ ಪಿಎಸ್‌ಐ ಪಾಪಣ್ಣ ಹಾಗೂ ಸಿಬ್ಬಂದಿಯನ್ನು ಎಸ್‌ಪಿ ಜಿ.ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.
ಸಿಸಿಟಿವಿಯಲ್ಲಿ ಚಿತ್ರೀಕರಣ: ಹೊಲದಲ್ಲಿ ಶೋಭಾ ಕೆಲಸ ಮಾಡುತ್ತಿದ್ದಾಗ ಆರೋಪಿ ಶಂಕರ್ ಮಾತನಾಡಿಸಿದ್ದನ್ನು ಮಗಳು ನೋಡಿದ್ದಳು. ಅಲ್ಲದೆ ಕೋನಾಪುರದ ಇಬ್ಬರು ವ್ಯಕ್ತಿಗಳು ಶಂಕರ್ ಶೋಭಾಳ ಬಳಿ ಕೆಟ್ಟದಾಗಿ ವರ್ತಿಸುತಿದ್ದುದನ್ನು ನೋಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅನುಮಾನ ಬಂದ ಪೊಲೀಸರು ಬಟ್ಲಹಳ್ಳಿ ಬಾರ್‌ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಈತನ ಸುಳಿವು ಸಿಕ್ಕಿತ್ತು.