

ಬೀದರ್: ತಾಲೂಕಿನ ವಿಳಾಸಪುರ ಹಾಗೂ ರಾಜನಾಳ ಗ್ರಾಮಗಳಿಗೆ ವಯಾ ಜನವಾಡ, ಅಲಿಯಂಬರ್ ಮಾರ್ಗವಾಗಿ ಈಶಾನ್ಯ ಸಾರಿಗೆ ಬಸ್ ಓಡಿಸಬೇಕು ಎಂದು ಬಿಜೆಪಿ ಬೀದರ್ ತಾಲೂಕು (ಗ್ರಾಮಾಂತರ) ಅಧ್ಯಕ್ಷ ರಾಜೇಂದ್ರ ಪೂಜಾರಿ ಆಗ್ರಹಿಸಿದ್ದಾರೆ.
ಈ ಕುರಿತು ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿ, ಎರಡೂ ಗ್ರಾಮಗಳಿಗೆ ಬಸ್ ಓಡಿಸಲು ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬೇಗ ಕ್ರಮ ಕೈಗೊಂಡು ಜನರ ಸಂಚಾರ ಸಂಕಷ್ಟ ನಿವಾರಣೆ ಮಾಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ವಿಳಾಸಪುರ ಹಾಗೂ ರಾಜನಾಳ ಗ್ರಾಮಗಳಲ್ಲಿ 4 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಗ್ರಾಪಂ ಕೇಂದ್ರವಾದ ಅಲಿಯಂಬರ್ ಹಾಗೂ ಜಿಪಂ ಕ್ಷೇತ್ರವಾದ ಜನವಾಡಕ್ಕೆ ನಿತ್ಯ ಆಸ್ಪತ್ರೆ, ನಾಡ ಕಚೇರಿ, ಪೊಲೀಸ್ ಠಾಣೆ, ಬ್ಯಾಂಕ್ ಸೇರಿದಂತೆ ವಿವಿಧ ಕೆಲಸಗಳಿಗೆ ಸಾರ್ವಜನಿಕರು ಹೋಗಿ ಬರುತ್ತಾರೆ. ಆದರೆ ಈ ಮಾರ್ಗದಿಂದ ಬಸ್ ಇಲ್ಲದ ಕಾರಣ ಪರದಾಡಬೇಕಾಗಿದೆ. ಹೆಚ್ಚಿನ ಹಣ ಕೊಟ್ಟು ಖಾಸಗಿ ವಾಹನಗಳಲ್ಲಿ ಅಪಾಯಕಾರಿ ಸಂಚಾರ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ದೂರಿದ್ದಾರೆ.
ಜನರ ಅನುಕೂಲಕ್ಕಾಗಿ ಪ್ರತಿ ನಿತ್ಯ ಬೆಳಗ್ಗೆ 7.30, 10.30 ಹಾಗೂ ಮಧ್ಯಾಹ್ನ 2.30, ಸಂಜೆ 6.30ಕ್ಕೆ ಬೀದರ್ ನಿಂದ ಜನವಾಡ, ಅಲಿಯಂಬರ್ ಮಾರ್ಗವಾಗಿ ವಿಳಾಸಪುರ ಮತ್ತು ರಾಜನಾಳ ಗ್ರಾಮಕ್ಕೆ ಬಸ್ ಸಂಚರಿಸಬೇಕು ಎಂದು ಕೋರಿದ್ದಾರೆ.