ವಿಳಂಬವಾಗದಂತೆ ಕಾರ್ಯ ನಿರ್ವಹಿಸಿ

h9-vote
Published on

ಧಾರವಾಡ: ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿ ನವ ಮತದಾರ ಸೇರ್ಪಡೆ, ಫ್ಯಾಮಿಲಿ ಟ್ಯಾಗಿಂಗ್, ಎಪಿಕ್ ಕಾರ್ಡ್ ವಿತರಣೆ ಕಾರ್ಯಗಳು ವಿಳಂಬವಾಗದಂತೆ ಪೂರ್ಣಗೊಳಿಸಬೇಕು ಎಂದು ಜಿಲ್ಲೆಯ ಮತದಾರರ ಯಾದಿ ಪರಿಷ್ಕರಣೆ ವೀಕ್ಷಕ ವಿ. ಪೊನ್ನುರಾಜ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕರಡು ಮತದಾರ ಪಟ್ಟಿ ಪರಿಷ್ಕರಣೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತಗಟ್ಟೆ ಅಧಿಕಾರಿಗಳು ಮತಗಟ್ಟೆ ವ್ಯಾಪ್ತಿಯ ಪ್ರತಿಯೊಬ್ಬ ವಯಸ್ಕ ನಾಗರಿಕ ಮತದಾರ ಪಟ್ಟಿಯಿಂದ ಹೊರಗೆ ಉಳಿಯದಂತೆ ಸೇರ್ಪಡೆ ಮಾಡಬೇಕು. ಮನೆ ಮನೆಗೆ ಭೇಟಿ ನೀಡಿ ಮತದಾರರ ಸೇರ್ಪಡೆ ಪೂರ್ಣವಾಗಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಮತಗಟ್ಟೆ ಮೇಲ್ವಿಚಾರಕರು ಸಮರ್ಪಕ ಉಸ್ತುವಾರಿ ಮಾಡಬೇಕು. ಮತದಾರ ನೋಂದಣಿ ಅಧಿಕಾರಿಗಳು, ಸಹಾಯಕ ಅಧಿಕಾರಿಗಳು ಮತಗಟ್ಟೆಗೆ ನಿರಂತರ ಭೇಟಿ ನೀಡಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಜಿಲ್ಲೆಯ 7 ವಿಧಾನಸಭೆ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ 1,634 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗೆ ಒಬ್ಬರಂತೆ 1,634 ಬಿಎಲ್​ಒಗಳನ್ನು ಮತ್ತು 163 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.

ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಉಸ್ತುವಾರಿಗಳಿಗೆ ಕಾಲಕಾಲಕ್ಕೆ ಅಗತ್ಯ ತರಬೇತಿ ನೀಡಲಾಗಿದ್ದು, ಸಮರ್ಪಕವಾಗಿ ಕಾರ್ಯನಿರ್ಹಿಸುತ್ತಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ್ ಹಾಗೂ ತಹಸೀಲ್ದಾರರು ಮಾಹಿತಿ ನೀಡಿದರು. ಮತದಾರರ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರ ನೋಂದಣಿ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಮತದಾರರ ನೋಂದಣಿ ಪರಿಶೀಲನೆ

ಹುಬ್ಬಳ್ಳಿ: ವಿ.ಪೊನ್ನರಾಜ್ ಅವರು ಗುರುವಾರ ನಗರದಲ್ಲಿ ಮತದಾರರ ನೋಂದಣಿ ಪ್ರಕ್ರಿಯೆ ಪರಿಶೀಲಿಸಿದರು.

ಓರಿಯಂಟಲ್ ಪಬ್ಲಿಕ್ ಸ್ಕೂಲ್ ಹಾಗೂ ಜೈಂಟ್ಸ್ ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಕನ್ನಡ ಮಾದರಿ ಗಂಡು ಮಕ್ಕಳ ಶಾಲೆ (ನಂ.16) ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿದರು. ಅಧಿಕಾರಿಗಳು ಮಿಂಚಿನ ನೋಂದಣಿ ಕುರಿತು ವ್ಯಾಪಕ ಪ್ರಚಾರ ನೀಡಬೇಕು. ಯುವ ಮತದಾರರ ನೋಂದಣಿ ಕುರಿತು ವಿಭಿನ್ನ ಕಾರ್ಯಕ್ರಮಗಳನ್ನು ಜರುಗಿಸಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮತಗಟ್ಟೆ ಅಧಿಕಾರಿಗಳಿಗೆ ವಿವಿಧ ನಮೂನೆಗಳ ಕುರಿತು ಪ್ರಶ್ನಿಸಿದರು. ಬಳಿಕ ಅವರು ಹು-ಧಾ ಬಿಆರ್​ಟಿಎಸ್ ಘಟಕಕ್ಕೆ ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net