ವಿರೂಪಗೊಂಡಿರುವ ರಾಷ್ಟ್ರಧ್ವಜಗಳನ್ನು ಹಾರಿಸಬಾರದು

Published on

ಹಾಸನ: ಮನೆಮನೆಯಲ್ಲಿ ತ್ರಿವರ್ಣಧ್ವಜ ಹಾರಿಸುವ ಸಂದರ್ಭದಲ್ಲಿ ಧ್ವಜ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಯಾವುದೇ ಕಾರಣಕ್ಕೂ ವಿರೂಪಗೊಂಡಿರುವ ರಾಷ್ಟ್ರಧ್ವಜಗಳನ್ನು ಹಾರಿಸಬಾರದು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚನೆ ನೀಡಿದರು.


ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ರಾಷ್ಟ್ರಧ್ವಜಗಳನ್ನು ವಿತರಿಸುವ ಮೂಲಕ ‘ಮನೆಮನೆಯಲ್ಲಿ ತ್ರಿವರ್ಣ ಧ್ವಜ’ ಅಭಿಯಾನಕ್ಕೆ ಸಾಂಕೇತಿಕ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಹರಿದ, ಹೊಲಿಗೆಬಿಟ್ಟಿರುವ, ಸರಿಯಾದ ಅಳತೆಯಲ್ಲಿರದ, ವಿರೂಪಗೊಂಡ ಮತ್ತು ರಾಷ್ಟ್ರಧ್ವಜದ ನಡುವೆ ಇರುವ ಚಕ್ರವು ಓರೆಯಾಗಿರುವ ಅಥವಾ ಅಂಚಿನಲ್ಲಿರುವ ಧ್ವಜಗಳನ್ನು ಹಾರಿಸಬಾರದು ಎಂದು ಹೇಳಿದರು.


ಆಗಸ್ಟ್ 13 ರಿಂದ 15 ರವರೆಗೆ ಸಾರ್ವಜನಿಕರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬಹುದು, ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ರಾಷ್ಟ್ರಧ್ವಜಾರೋಹಣ ಮಾಡಬೇಕು. ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಯಾವುದೇ ಧ್ವಜ ಅಥವಾ ಬಂಟಿಂಗ್ ಇರಬಾರದು. ರಾಷ್ಟ್ರಧ್ವಜವನ್ನು ಮೇಜು ಅಥವಾ ವೇದಿಕೆಯನ್ನು ಮುಚ್ಚಲು ಅಥವಾ ಅಲಂಕರಿಸಲು ಬಳಸಬಾರದು. ಮನೆಮನೆಗಳಲ್ಲಿ ಆಗಸ್ಟ್ 13 ರಂದು ರಾಷ್ಟ್ರಧ್ವಜ ಹಾರಿಸಿದ ನಂತರ ಮಳೆ, ಬಿಸಿಲು, ಚಳಿ, ಮಂಜು, ಗಾಳಿ ಮತ್ತಿತರ ಯಾವುದೇ ಸಂದರ್ಭದಲ್ಲೂ ಆಗಸ್ಟ್ 15 ರ ಸಂಜೆ 6 ಗಂಟೆಯವರೆಗೆ ಕೆಳಗಿಳಿಸಬಾರದು ಮತ್ತು ಬೀಳದಂತೆ ನೋಡಿಕೊಳ್ಳಬೇಕು ಎಂದು ಧ್ವಜಸಂಹಿತೆಯ ಮಾಹಿತಿ ನೀಡಿದರು.


ಯಾವುದೇ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಪ್ರದರ್ಶಿಸಬಾರದು. ಅಭಿಯಾನ ಮಗಿದ ನಂತರ ರಾಷ್ಟ್ರಧ್ವಜದ ಅವರೋಹಣ ಮಾಡಿ ಗೌರವಕ್ಕೆ ಧಕ್ಕೆ ಆಗದ ರೀತಿಯಲ್ಲಿ ಸಂರಕ್ಷಿಸಿ ಇಟ್ಟುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.


3.25 ಲಕ್ಷ ಧ್ವಜ ವಿತರಣೆ:
ಜಿಲ್ಲೆಯಲ್ಲಿ 3.25 ಲಕ್ಷ ರಾಷ್ಟ್ರಧ್ವಜ ವಿತರಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಸ್ವಸಹಾಯ ಗುಂಪುಗಳು, ಗ್ರಾಮ ಪಂಚಾಯಿತಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಂಘಸಂಸ್ಥೆಗಳ ಮೂಲಕ 2.25 ಲಕ್ಷ ಧ್ವಜಗಳ ವಿತರಣೆ ಮಾಡಲಾಗಿದೆ. ಉಳಿದ ಧ್ವಜಗಳ ವಿತರಣೆ ಕಾರ್ಯ ನಡೆಯುತ್ತಿದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವರ್ತಕರು ರಾಷ್ಟ್ರಧ್ವಜ ಹಾರಿಸುವುದರ ಜೊತೆಗೆ ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ತಮ್ಮ ವ್ಯಾಪಾರ ಕೇಂದ್ರವನ್ನು ಅಲಂಕರಿಸಿ ಸ್ವಾತಂತ್ರೃದ ಅಮೃತ ಮಹೋತ್ಸವಕ್ಕೆ ಮೆರಗು ನೀಡುವಂತೆ ಕೋರಲಾಗಿದೆ ಎಂದರು.


ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಕಾಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net