

ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಪ್ರಾಂಗಣದಲ್ಲಿ ‘ವಿರಾಟಪುರ ವಿರಾಗಿ’ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ಶನಿವಾರ ಸಂಭ್ರಮದಿಂದ ನಡೆಯಿತು.
ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು ಜಾತಿ ಮೀರಿ ಸಮಾಜ ಸುಧಾರಣೆಗಾಗಿ ಶ್ರಮಿಸಿದವರು. ಅವರ ಜೀವನಾಧಾರಿತ ಸಿನಿಮಾ ಮಾಡಿರುವುದು ಪುಣ್ಯದ ಕೆಲಸ. ಇಂತಹ ಮಹನೀಯರು ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ನಾವು ಕಲಿತು ಬಂದಿದ್ದೇವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.
ಅಣ್ಣ ಬಸವಣ್ಣ ಹಾಗೂ ಯಡಿಯೂರು ಸಿದ್ಧಲಿಂಗೇಶ್ವರರು ಸಮಾಜ ಸುಧಾರಿಸುವ ಕೆಲಸ ಮಾಡಿದ್ದಾರೆ. ಆ ಬಳಿಕ ಈ ಪರಂಪರೆಯನ್ನು ಮುಂದುವರಿಸಿದವರೆಂದರೆ ಹಾನಗಲ್ ಕುಮಾರಸ್ವಾಮಿಗಳು. ಅವರ ಜೀವನ ಸಂದೇಶ ಚಿತ್ರದ ಮೂಲಕ ಎಲ್ಲರಿಗೂ ತಲುಪಬೇಕು ಎಂದು ಹೇಳಿದರು.
ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ ಅವರು ಮಾತನಾಡಿ, ತಮ್ಮ ಜೀವನವನ್ನು ಸಮಾಜ ಸುಧಾರಣೆಗಾಗಿ ಮುಡಿಪಾಗಿಟ್ಟವರು ಹಾನಗಲ್ ಕುಮಾರಸ್ವಾಮಿಗಳು. ಅವರ ಜೀವನಾಧಾರಿತ ಚಿತ್ರವು ಖ್ಯಾತ ನಿರ್ದೇಶಕ ಬಿ.ಎಸ್. ಲಿಂಗದೇವರು ನಿರ್ದೇಶನದಲ್ಲಿ ಮೂಡಿಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಉದ್ಯಮಿ ವಿವೇಕ ಗಬ್ಬೂರ, ಮಹಾಂತೇಶ ಕುಮಟಗಿ, ಬಸವರಾಜ ಹೊಸಕಟ್ಟಿ, ಸಂಗಮೇಶ ಅಂಟಿನ, ಕುಮಾರ ಭಗವತಿ, ಅಶೋಕ ಪಾಟೀಲ, ಪ್ರಸಾದ ಹೊಂಬಳ ಇತರರು ಇದ್ದರು.
ಶಿಕ್ಷಕಿ ಸುವರ್ಣ ಭೂಸನೂರ ಪ್ರಾರ್ಥಿಸಿದರು.