‘ವಿರಾಟಪುರ ವಿರಾಗಿ’ ಚಲನಚಿತ್ರ ಧ್ವನಿ ಸುರುಳಿ ಬಿಡುಗಡೆ

4
Published on

ಮೈಸೂರು: ಶ್ರೀ ಗುರುದೇವ ಸೇವಾ ಸಂಸ್ಥೆ (ಸಮಾಧಾನ)ಯಿಂದ ನಿರ್ಮಿಸಿರುವ ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧರಿತ ‘ವಿರಾಟಪುರ ವಿರಾಗಿ’ ಚಲನಚಿತ್ರದ ಧ್ವನಿಸುರುಳಿ ನಗರದಲ್ಲಿ ಬಿಡುಗಡೆಗೊಂಡಿತು.
ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಡಾ.ಗೊ.ರು.ಚನ್ನಬಸಪ್ಪ ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿದರು.
ಸಾರ್ವಜನಿಕರನ್ನು ಚಿಂತನಾಶೀಲರನ್ನಾಗಿ ಮಾಡಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಸಾತ್ವಿಕಗೊಳಿಸುವುದು ಮಠಗಳ ಪ್ರಮುಖ ಉದ್ದೇಶ. ಆ ಕೆಲಸವನ್ನು ಹಾನಗಲ್‌ನ ಕುಮಾರ ಶಿವಯೋಗಿಗಳು ಜೀವನಪರ್ಯಂತ ಮಾಡಿದ್ದಾರೆ ಎಂದು ಬಣ್ಣಿಸಿದರು.
100 ವರ್ಷಗಳ ಹಿಂದೆಯೇ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸುವ ಮೂಲಕ ವೀರಶೈವ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿರುವ ಕುಮಾರ ಶಿವಯೋಗಿಗಳ ಉಜ್ವಲ ಜೀವನದ ಮರುದರ್ಶನ ಸಿನಿಮಾ ಮೂಲಕ ಆಗುತ್ತಿರುವುದು ಸಂತಸದ ವಿಚಾರ. ಮಠ-ಮಾನ್ಯಗಳು ವ್ಯಂಗ್ಯಕ್ಕೆ ಒಳಗಾಗುತ್ತಿರುವ ಪ್ರಸ್ತುತ ದಿನಮಾನದಲ್ಲಿ ಶಿವಯೋಗಿಗಳ ಚಿತ್ರದ ಮೂಲಕ ಒಂದು ಘನತೆ ತಂದು ಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಶ್ರೀ ಕುಮಾರ ಶಿವಯೋಗಿಗಳನ್ನು ಸಮಾಜ ಸೇವೆಗೆ ಸಜ್ಜುಗೊಳಿಸಿದ ಶ್ರೇಯಸ್ಸು ಹಿಂದಿನ ಅವಿಭಜಿತ ಮೈಸೂರು ಜಿಲ್ಲೆಗೆ ಸಲ್ಲುತ್ತದೆ. ಅವರ ಜೀವನ ಪರಿಚಯ ಈಗಾಗಲೇ ಆಗಬೇಕಿತ್ತು. ಈಗಲಾದರೂ ಆಗುತ್ತಿರುವುದು ಸಮಾಧಾನದ ಸಂಗತಿ. ಚಿತ್ರದಲ್ಲಿ ಪಾತ್ರಗಳ ಮರುಸೃಷ್ಟಿ ಕಷ್ಟದ ಕೆಲಸ. ಅದನ್ನು ನಿರ್ದೇಶಕ ಲಿಂಗದೇವರು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರವನ್ನು ಕಲಾತ್ಮಕವಾಗಿ ರೂಪಿಸಲು ಪಟ್ಟಿರುವ ಶ್ರಮ ಶ್ಲಾಘನೀಯ ಎಂದರು.
ಚಲನಚಿತ್ರ ಸಮಾಜದ ಪ್ರಭಾವಿ ಮಾಧ್ಯಮವಾಗಿದ್ದು, ಅದನ್ನು ಈ ಚಿತ್ರದ ಮೂಲಕ ಉತ್ತಮವಾಗಿ ಬಳಸಿಕೊಳ್ಳಲಾಗಿದೆ. ಈ ಚಿತ್ರವನ್ನು ವ್ಯವಹಾರಿಕವಾಗಿ ನೋಡದೆ ಕಲಾತ್ಮಕವಾಗಿ ಗಮನಿಸಬೇಕು. ಸಮಾಜದ ಪ್ರತಿಯೊಬ್ಬರೂ ಚಿತ್ರ ವೀಕ್ಷಿಸಿ ಪ್ರೋತ್ಸಾಹ ನೀಡಬೇಕು. ಮಠಾಧೀಶರಾದವರು ಹೇಗೆ ತಮ್ಮ ಜವಾಬ್ದಾರಿ ನಿಭಾಯಿಸಬೇಕೆಂಬುದನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿರುವುದರಿಂದ ಮಠಾಧೀಶರು ತಪ್ಪದೆ ಚಿತ್ರ ವೀಕ್ಷಿಸಬೇಕು ಎಂದು ಕೋರಿದರು.
ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಅಜ್ಞಾತದಲ್ಲೇ ಉಳಿದು ಹೋಗಬೇಕಾಗಿದ್ದ ಚೇತನ ಸಮಾಜಕ್ಕೆ ಕುಸುಮವಾದ ಪರಿಯನ್ನು ‘ವಿರಾಟಪುರ ವಿರಾಗಿ’ ಚಿತ್ರ ತೋರಿಸಲಿದೆ. ಕುಮಾರ ಶಿವಯೋಗಿಗಳು ವ್ಯಕ್ತಿಯಲ್ಲ, ಅಗಾಧ ಶಕ್ತಿ ಎಂಬುದು ಚಿತ್ರ ವೀಕ್ಷಿಸಿದ ಬಳಿಕ ಅರ್ಥವಾಗಲಿದೆ. ಎಷ್ಟು ಮಂದಿ ಚಿತ್ರ ವೀಕ್ಷಿಸಿದರು, ಎಷ್ಟು ದಿನ ಪ್ರದರ್ಶನವಾಯಿತು ಎನ್ನುವುದಕ್ಕಿಂತ ಇಂತಹ ಚಿತ್ರ ನಿರ್ಮಾಣವಾಗಿದ್ದೇ ದೊಡ್ಡ ಇತಿಹಾಸವಾಗಲಿದೆ ಎಂದು ವಿಶ್ಲೇಷಿಸಿದರು.
ಚಿತ್ರದ ನಿರ್ದೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ನಾನು ಎಂದೂ ದೇವಸ್ಥಾನಗಳಿಗೆ, ಮಠಗಳಿಗೆ ಹೋದವನೇ ಅಲ್ಲ. ಆದರೂ ಮಹಾ ಸಂತನ ಸಿನಿಮಾ ಮಾಡಿದ್ದೇನೆ. ಇಷ್ಟೆಲ್ಲ ಆಗಿರುವುದು ಗುರುಗಳ ಪ್ರೇರಣಾ ಶಕ್ತಿಯಿಂದ. ವಿರಾಟಪುರ ಈಗಿನ ಹಾನಗಲ್ಲಿನ ಹಿಂದಿನ ಹೆಸರು. ಎರಡೂವರೆ ವರ್ಷಗಳ ಸತತ ಪ್ರಯತ್ನದಿಂದ ‘ವಿರಾಟಪುರ ವಿರಾಗಿ’ ಸಿನಿಮಾ ನಿರ್ಮಾಣವಾಗಿದೆ. ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಅವರು ಭಿಕ್ಷೆ ಬೇಡಿ ಸಿನಿಮಾ ನಿರ್ಮಾಣಕ್ಕೆ ಹಣ ನೀಡಿದ್ದಾರೆ. ಅವರ ಶ್ರಮಕ್ಕೆ ಸಾರ್ಥಕತೆ ಬರುವಂತೆ ಚಿತ್ರ ಮೂಡಿಬಂದಿದ್ದು, ಎಲ್ಲರೂ ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದು ಕೋರಿದರು.
ಶಾಂತಲಿಂಗೇಶ್ವರ ವಿರಕ್ತ ಮಠದ ಶ್ರೀ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ, ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ, ಮೂಡಿ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದೀಶ್ ಹಂಚೆ, ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ, ಗಾಯಕ ರವೀಂದ್ರ ಸೊರಗಾವಿ ಇತರರು ಇದ್ದರು.

ರಥಯಾತ್ರೆಗೆ ಏಕಕಾಲದಲ್ಲಿ ಚಾಲನೆ
ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧರಿತ ‘ವಿರಾಟಪುರ ವಿರಾಗಿ’ ಚಲನಚಿತ್ರದ ಪ್ರಚಾರ ರಥಯಾತ್ರೆಗೂ ನಗರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ರಾಜ್ಯಾದ್ಯಂತ ಒಟ್ಟು ಆರು ರಥಗಳು ಏಕಕಾಲದಲ್ಲಿ ಸುಮಾರು 7 ಸಾವಿರ ಕಿ.ಮೀ. ಸಂಚರಿಸಲಿವೆ.
ಡಿ.20ರಿಂದ ಜ.1ರವರೆಗೆ 13 ದಿನಗಳ ಕಾಲ ರಥಗಳು ರಾಜ್ಯಾದ್ಯಂತ ಸಂಚರಿಸಲಿದ್ದು, ಈ ಅವಧಿಯಲ್ಲಿ 360 ಸಭೆಗಳು ನಡೆಯಲಿವೆ. ಇದರ ಮೂಲಕ ಸುಮಾರು ಒಂದು ಕೋಟಿ ಜನರನ್ನು ತಲುಪುವ ಉದ್ದೇಶವಿದೆ. ಜ.1ರಂದು ಗದಗದಲ್ಲಿ ಎಲ್ಲ ರಥಗಳು ಒಂದುಗೂಡಲಿದ್ದು, ರಾಜ್ಯದ ಪ್ರಮುಖ ಮಠಾಧೀಶರು, ಜಾನಪದ ಕಲಾತಂಡಗಳ ಬೃಹತ್ ಮೆರವಣಿಗೆಯೊಂದಿಗೆ ಸಮಾರೋಪ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಬಿ.ಎಸ್.ಲಿಂಗದೇವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net