

ವಿರಾಜಪೇಟೆ: ವಿರಾಜಪೇಟೆ ತಾಲೂಕಿನಾದ್ಯಂತ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು ಇದೂವರೆಗೆ 1360.40 ಮಿ.ಮೀ. ಮಳೆಯಾಗಿದ್ದು, ಗದ್ದೆಗಳು ಜಲಾವೃತವಾಗಿದೆ.
ಎರಡು ದಿನಗಳಿಂದ ಮಳೆಯ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ವಿರಾಜಪೇಟೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದು, ನದಿ, ತೋಡು, ಕೆರೆಗಳು ತುಂಬಿ ಹರಿಯಲು ಆರಂಭಿಸಿವೆೆ. ಅದರಲ್ಲೂ ಅರಮೇರಿ, ಬಿಟ್ಟಂಗಾಲ, ಹೆಗ್ಗಳ, ಬೇಟೋಳಿ, ಚಿಟ್ಟಡೆ, ನಾಂಗಾಲ ಕದನೂರು, ಮೈತಾಡಿ ಕೊಟ್ಟೊಳಿ ಭಾಗದಲ್ಲಿ ಎರಡು ದಿನಗಳಿಂದ ಪ್ರವಾಹ ಉಂಟಾಗಿ ನದಿಯ ನೀರು ಸಮೀಪದ ಗದ್ದೆ, ತೋಟಗಳಲ್ಲಿ ಹರಿಯುತಿದೆ. ಇದರಿಂದ ರೈತರು ಅನುಭವಿಸುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ನದಿ ತೀರದ ಪ್ರದೇಶಗಳು ನಿರಂತರವಾಗಿ ಪ್ರವಾಹ ಉಂಟಾಗಿದೆ. ಕೆಲವೆಡೆ ಭತ್ತ ನಾಟಿ ಮಾಡುವ ಉದ್ದೇಶದಿಂದ ಗದ್ದೆಗಳಲ್ಲಿ ಬಿತ್ತನೆ ಕಾರ್ಯ ಮಾಡಲಾಗಿತ್ತು. ಇನ್ನು ಕೆಲವೆಡೆ ಬಿತ್ತನೆಯಾಗಿ ಕೆಲ ದಿನ ಕಳೆದಿದ್ದು, ಇದೀಗ ಉಂಟಾದ ಪ್ರವಾಹದ ಕಾರಣದಿಂದ ಬಿತ್ತನೆ ಬೀಜ ಕೊಚ್ಚಿ ಹೋಗುವ ಆತಂಕ ಎದುರಾಗಿದೆ. ಅಲ್ಲದೆ ಸಣ್ಣ ಸಸಿ ಮಡಿ ಕೊಳೆತು ಹೋಗುವ ಭೀತಿ ಕಾಡುತ್ತಿದೆ . ವಿರಾಜಪೇಟೆ ಪಟ್ಟಣ ಪ್ರದೇಶದಲ್ಲಂತೂ ಮಳೆ ನೀರು ನಿರಂತರವಾಗಿದೆ. ರಸ್ತೆಯಲ್ಲೇ ನದಿಯಂತೆ ಮಳೆ ನೀರು ಹರಿಯುತ್ತಿದೆ. ವಾರದ ಸಂತೆಯ ದಿನವಾದ ಬುಧವಾರ ರಸ್ತೆಬದಿ ನಿರಂತರವಾಗಿ ಕೆಸರು ನೀರು ಹರಿದಿದ್ದು. ತರಕಾರಿ ವ್ಯಾಪಾರಿಗಳು, ಗ್ರಾಹಕರು ಪರದಾಡಿದರು.