ವಿರಾಜಪೇಟೆ ಪುರಸಭೆಗೆ 46,54,422 ರೂ.ಉಳಿತಾಯ ಬಜೆಟ್

16vtp1 badget mandane
Published on

ವಿರಾಜಪೇಟೆ: ವಿರಾಜಪೇಟೆ ಪುರಸಭೆಯ 2023-24ನೇ ಸಾಲಿನ 46,54,422 ರೂ.ಗಳ ಉಳಿತಾಯ ಆಯವ್ಯಯವನ್ನು ಅಧ್ಯಕ್ಷೆ ಸುಶ್ಮಿತಾ ಗುರುವಾರ ಮಂಡಿಸಿದರು.


ಆರಂಭಿಕ ಶಿಲ್ಕು 4,72,04,422 ರೂ.ಗಳಾಗಿದ್ದು, ನಿರೀಕ್ಷಿತ ಆದಾಯ 13,48,80,000 ರೂ. ಇದೆ. ಒಟ್ಟು 18,20,84,422 ರೂ.ಗಳಲ್ಲಿ ನಿರೀಕ್ಷಿತ ಖರ್ಚು 17,74,30,000 ರೂ. ವ್ಯಯಿಸಿ, 46,54,422 ರೂ.ಉಳಿತಾಯವಾಗಲಿದೆ ಎಂದು ಮಾಹಿತಿ ನೀಡಿದರು.


ಕಾಂಗ್ರೆಸ್ ಸದಸ್ಯ ಸಿ.ಕೆ.ಪೃಥ್ವಿನಾಥ್ ಮಾತನಾಡಿ, ಕಳೆದ ಬಜೆಟ್ ಪ್ರತಿ ಪುನರಾವರ್ತನೆಯಾಗಿದೆ. ಅಧ್ಯಕ್ಷರು ಪಟ್ಟಣದ 24 ಸಾವಿರ ಜನರ ಕಿವಿಗೆ ಹೂ ಇಡುತ್ತಿದ್ದಾರೆ. ಹಾಗಾಗಿ ನಾವೂ ಕಿವಿಗೆ ಹೂ ಇಟ್ಟಕೊಂಡು ಸಭೆಯಲ್ಲಿ ಭಾಗವಹಿಸಿದ್ದೇವೆ ಎಂದು ವ್ಯಂಗ್ಯವಾಡಿದರು.


ಕಳೆದ 30 ತಿಂಗಳಲ್ಲಿ ಸಂಸದರು, ಶಾಸಕರ ಮೂಲಕ ಹಾಗೂ ವಿಶೇಷ ಅನುದಾನ ಎಷ್ಟು ತಂದಿದ್ದೀರಾ ಎಂಬುದನ್ನು ಸಭೆಗೆ ತಿಳಿಸುವಂತೆ ಆಗ್ರಹಿಸಿದರು. ನೀರಿನ ಕರ, ವಿದ್ಯುತ್ ಬಿಲ್, ಮನೆ ತೆರಿಗೆ ಎಲ್ಲವನ್ನೂ ಹೆಚ್ಚಿಗೆ ಮಾಡಿರುವುದೇ ನಿಮ್ಮ ಸಾಧನೆ ಎಂದು ಟೀಕಿಸಿದರು.


ರಾಜೇಶ್ ಮಾತನಾಡಿ, ಇದು ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಕಟ್ ಆ್ಯಂಡ್ ಪೇಸ್ಟ್ ಬಜೆಟ್. ಕಳೆದ ಬಜೆಟ್‌ನಲ್ಲಿ ಮಂಡಿಸಿದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಕ್ಕೆ ಬಂದಿಲ್ಲ. ಈ ಬಜೆಟ್ ಪ್ರತಿಯಲ್ಲಿ ಹಲವು ನ್ಯೂನತೆಗಳಿವೆ. ಕುಡಿಯುವ ನೀರಿನ ಯೋಜನೆ ವಿಷಯದಲ್ಲಿ ಡಿಪಿಆರ್ ಮಾಡಲು 2 ವರ್ಷಗಳಿಂದ ಸಾಮಾನ್ಯ ನಿಧಿಯಿಂದ 8 ಲಕ್ಷ ರೂ. ವ್ಯಯ ಮಾಡಲಾಗಿದೆ. ಅದನ್ನು ಪ್ರತಿಯಲ್ಲಿ ಶೂನ್ಯವೆಂದು ನಮೂದಿಸಲಾಗಿದೆ. ಒಂದು ಲಕ್ಷಕ್ಕೆ ಶೇ.18ರಷ್ಟು ಜಿಎಸ್‌ಟಿ ನೀಡಬೇಕಾಗಿದೆ. ಉಳಿದ ಹಣದಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಲು ಸಾಧ್ಯ? ಬಿಪಿಎಲ್ ಕುಟುಂಬದವರ ಶವಸಂಸ್ಕಾರ ಸಹಾಯಧನಕ್ಕಾಗಿ ಒಟ್ಟು ಒಂದು ಲಕ್ಷ, ಅಂಗವಿಕಲರಿಗೆ ನೀಡುವ ಸಹಾಯಧನ 1 ಲಕ್ಷ ಮೀಸಲಿಡಲಾಗಿದೆ. ಅದನ್ನು 5 ಲಕ್ಷಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.


ಪಕ್ಷೇತರ ಸದಸ್ಯೆ ಮನಿಯಪಂಡ ದೇಚಮ್ಮ ಮಾತನಾಡಿ, ದಾಸ್ತಾನು ಮತ್ತು ಅನುಪಯುಕ್ತ ವಸ್ತುಗಳ ಮಾರಾಟದಿಂದ 50 ಸಾವಿರ ರೂ. ಎಂದು ಬಜೆಟ್ ಪ್ರತಿಯಲ್ಲಿ ನಮೂದಿಸಲಾಗಿದೆ. ಪಂಪ್‌ಹೌಸ್, ಜಿಸಿಬಿ, ಟ್ರಾೃಕ್ಟರ್, ಕಸ ಹಾಕುವ ಡಬ್ಬ ಎಲ್ಲವೂ ಲಕ್ಷಾಂತರ ರೂ. ಬೆಲೆ ಬಾಳುತ್ತವೆ. ಸಾರ್ವಜನಿಕ ಶೌಚಗೃಹ ದುರಸ್ತಿಗೆ 2.50 ಲಕ್ಷ ರೂ. ಮೀಸಲಿಡಲಾಗಿದೆ. ಅದನ್ನು 5 ಲಕ್ಷಕ್ಕೆ ಏರಿಸಿ. ಬೀದಿ ದೀಪಗಳ ನಿರ್ವಹಣೆಗೆ ಶೂನ್ಯ ಎಂದು ನಮೂದಿಸಲಾಗಿದೆ. ಇದನ್ನು ಪರಿಶೀಲಿಸಿ ಎಂದು ಒತ್ತಾಯಿಸಿದರು.
ಮತೀನ್ ಮಾತನಾಡಿ, ಸಾರ್ವಜನಿಕ ಸ್ಮಶಾನದಲ್ಲಿ ಸಿಲಿಕಾನ್ ಚೇಂಬರ್ ಹಾಗೂ ಶವಸಂಸ್ಕಾರಕ್ಕೆ ಗ್ಯಾಸ್ ವ್ಯವಸ್ಥೆಯನ್ನು ಕಲ್ಪಿಸಲು ಅನುದಾನ ಮೀಸಲಿಡುವಂತೆ ಮನವಿ ಮಾಡಿದರು.

ಪಟ್ಟಡ ರಂಜಿ ಪೂಣಚ್ಚ, ಮಹಮದ್ ರಾಫಿ ಮಾತನಾಡಿದರು. ಉಪಾಧ್ಯಕ್ಷ ಮಂಡೇಪಂಡ ವಿನಾಮಕ್ ಕುಟ್ಟಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಜಪರವಂಡ ಯಶೋದಾ, ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net