

ತಿ.ನರಸೀಪುರ: ತಾಲೂಕಿನ ಮದ್ಗಾರಲಿಂಗಯ್ಯನ ಹುಂಡಿ ಗ್ರಾಮದಲ್ಲಿ ಅಲ್ಲಮ ಪ್ರಭು ಸೇವಾ ಟ್ರಸ್ಟ್ ವತಿಯಿಂದ ಫೆ.12ರಂದು ವಿರಕ್ತಮಠದ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಿವಸ್ವಾಮೀಜಿ ಅವರ 15ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮ ಹಾಗೂ ಪ್ರಸಾದ ನಿಲಯ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂ.ಎಲ್. ವಿರಕ್ತಮಠದ ಮಠಾಧೀಶರು ಹಾಗೂ ಅಲ್ಲಮಪ್ರಭು ಸೇವಾ ಟ್ರಸ್ಟ್ ಅಧ್ಯಕ್ಷರೂ ಆದ ಶ್ರೀ ಗೌರಿಶಂಕರ ಸ್ವಾಮೀಜಿ ತಿಳಿಸಿದರು.
ಅಂದು ಮಠದ ಆವರಣದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಸಾದ ನಿಲಯ ಕಟ್ಟಡವನ್ನು ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಉದ್ಘಾಟಿಸಲಿದ್ದು, ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಲ್ಲಮಪ್ರಭು ಸೇವಾ ಟ್ರಸ್ಟ್ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಕರ್ತೃಗಳ ಗದ್ದಿಗೆಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಲಿದ್ದು, ಶಾಸಕ ಎಂ. ಅಶ್ವಿನ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕ ಡಾ.ಯತೀಂದ್ರ, ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್, ರಾಜ್ಯ ಅಫೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ. ಹರೀಶ್ ಗೌಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮೈಮುಲ್ ಅಧ್ಯಕ್ಷ ಪ್ರಸನ್ನ ಇತರರು ಭಾಗವಹಿಸಲಿದ್ದಾರೆ ಎಂದು ಸ್ವಾಮೀಜಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಮಾಧ್ಯಮ ವಕ್ತಾರ ದಯಾನಂದ ಪಟೇಲ್, ಜನಪದ ಕಲಾವಿದ ವೈ.ಬಿ. ಪ್ರಕಾಶ್, ಅಕ್ಕ ಮಹಾದೇವಿ ಟ್ರಸ್ಟ್‌ನ ನಿರ್ದೇಶಕ ತುರುಗನೂರು ಮಲ್ಲೇಶ್ ಹಾಜರಿದ್ದರು.