ವಿಮೆ ಹಣಕ್ಕಾಗಿ ವ್ಯಕ್ತಿ ಕೊಂದು ತಾನೇ ಸತ್ತಂತೆ ಬಿಂಬಿಸಿದ ವ್ಯಕ್ತಿ ಬಂಧನ

ವಿಮೆ ಹಣಕ್ಕಾಗಿ ವ್ಯಕ್ತಿ ಕೊಂದು ತಾನೇ ಸತ್ತಂತೆ ಬಿಂಬಿಸಿದ ವ್ಯಕ್ತಿ ಬಂಧನ
Published on

ಹಾಸನ: ವಿಮೆ ಹಣಕ್ಕಾಗಿ ಅಮಾಯಕ ವ್ಯಕ್ತಿಯನ್ನು ಕೊಲೆ ಮಾಡಿ, ಅಪಘಾತದಲ್ಲಿ ತಾನೇ ಮೃತಪಟ್ಟಿರುವಂತೆ ಬಿಂಬಿಸಿದ್ದ ವ್ಯಕ್ತಿ ಸೇರಿದಂತೆ ಇಬ್ಬರು ಆರೋಪಿಗಳಿನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗಾ ಗ್ರಾಮದ ಮುನಿಸ್ವಾಮಿಗೌಡ (49), ಲಾರಿ ಚಾಲಕ ದೇವೇಂದ್ರ ನಾಯಕ್ (36) ಎಂಬ ಇಬ್ಬರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮುನಿಸ್ವಾಮಿಗೌಡ ಪತ್ನಿ ಶಿಲ್ಪರಾಣಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಸುರೇಶ್, ವಸಂತ ಎಂಬುವರ ಬಂಧನಕ್ಕೆ ಬಲೆ ಬೀಸಲಾಗಿದೆ. ಮೃತಪಟ್ಟಿರುವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಆ.13ರಂದು ಬೆಳಗಿನ ಜಾವ 3.15ರ ಸುಮಾರಿಗೆ ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲರಹಳ್ಳಿ ಗೇಟ್ ಹತ್ತಿರ ಕಾರಿನ ಸ್ಟೆಪ್ನಿ ಬದಲಾಯಿಸುವಾಗ ಲಾರಿ ಗುದ್ದಿ ಸಾವು ಸಂಭವಿಸಿದೆ ಎಂಬ ದೂರು ಬಂದಿತ್ತು. ನಂತರ ಗಂಡಸಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಬಳಿಕ ಹೊಸಕೋಟೆ ನಗರದ ಶಿಲ್ಪಾರಾಣಿ ಬಂದು ಅಪಘಾತದಲ್ಲಿ ಮೃತಪಟ್ಟಿರುವುದು ನನ್ನ ಗಂಡ ಮುನಿಸ್ವಾಮಿಗೌಡ ಎಂದು ಹೇಳಿ ಮೃತದೇಹ ತೆಗೆದುಕೊಂಡು ಹೋಗಿ ಬಂಧುಗಳ ಸಮ್ಮುಖದಲ್ಲಿ ಚಿಕ್ಕಕೋಲಿಗಾ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಳು.
ಈ ಮೊದಲೇ ಸಂಚು ರೂಪಿಸಿದಂತೆ ಮುನಿಸ್ವಾಮಿಗೌಡ, ತನ್ನ ಪತ್ನಿ ಮೂಲಕ ಇನ್ಶೂರೆನ್ಸ್ ಹಣ ಪಡೆದುಕೊಳ್ಳಲು ಪ್ರಕ್ರಿಯೆ ಆರಂಭಿಸಿದ್ದ. ಘಟನೆ ನಡೆದ ನಾಲ್ಕೈದು ದಿನಗಳ ಬಳಿಕ ಘಟನೆಯಿಂದ ಭಯಭೀತಗೊಂಡಿದ್ದ ಮುನಿಸ್ವಾಮಿಗೌಡ ತನ್ನ ಸಂಬಂಧಿ ಹಾಗೂ ಆತ್ಮೀಯನು ಆಗಿದ್ದ ಶಿಡ್ಲಘಟ್ಟ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಮುಂದೆ ಇದ್ದಕ್ಕಿಂತೆ ಹಾಜರಾಗಿದ್ದಾನೆ. ಮೃತಪಟ್ಟ ಮುನಿಸ್ವಾಮಿಗೌಡ ಇದ್ದಕ್ಕಿದ್ದಂತೆ ತನ್ನ ಮುಂದೆ ನಿಂತಿರುವುದನ್ನು ಕಂಡು ಇನ್ಸ್‌ಪೆಕ್ಟರ್ ಕಕ್ಕಾಬಿಕ್ಕಿಯಾಗಿದ್ದಾರೆ. ಬಳಿಕ ಶ್ರೀನಿವಾಸ್ ಅವರು ನಡೆದ ವಿಷಯದ ಕುರಿತು ಪ್ರಶ್ನಿಸಿದಾಗ ಕೃತ್ಯ ಸಂಪೂರ್ಣ ಬಯಲಾಗಿದೆ. ಆ ಕೂಡಲೇ ಆತನನ್ನ ವಶಕ್ಕೆ ಪಡೆದ ಶ್ರೀನಿವಾಸ್ ತಕ್ಷಣ ಗಂಡಸಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬಯಲಿಗೆ ಬಂದಿದೆ.
ಆ ಬಳಿಕ ಆರೋಪಿಗಳ ಪತ್ತೆಗಾಗಿ ಹಾಸನ ಎಸ್ಪಿ ಅವರ ನೇತೃತ್ವದಲಿ,್ಲ ಎಎಸ್‌ಪಿ, ಅರಸೀಕೆರೆ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಗಂಡಸಿ ಸಿಪಿಐ ರಾಘವೇಂದ್ರ ಪ್ರಕಾಶ್, ಬಾಣಾವರ ಪಿಎಸ್‌ಐ ಸುರೇಶ್, ಗಂಡಸಿ ಪಿಎಸ್‌ಐ ಆರತಿ, ಮತ್ತು ಸಿಬ್ಬಂದಿ ತನಿಖೆ ಚುರುಕುಗೊಳಿಸಿದರು. ಕಡೆಗೆ ಅಪಘಾತ ಮಾಡಿದ ಲಾರಿ ಚಾಲಕ ದೇವೇಂದ್ರ ನಾಯಕ್ ಸಿಕ್ಕಿ ಬಿದ್ದ. ಆತನನ್ನು ವಿಚಾರಣೆಗೆ ಒಳ ಪಡಿಸಿದಾಗ ಅಪಘಾತದಲ್ಲಿ ಸತ್ತ ವ್ಯಕ್ತಿಯೇ ಬೇರೆ. ಮುನಿಸ್ವಾಮಿಗೌಡ ಬದುಕಿದ್ದಾನೆ ಎಂದು ತಿಳಿಸಿದ್ದಾನೆ ತಿಳಿಸಿದರು.
ಬಳಿಕ ಮುನಿಸ್ವಾಮಿಗೌಡನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಾನು ಹೊಸಕೋಟೆಯಲ್ಲಿ ಟಯರ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೆ. ಅಂಗಡಿಯಲ್ಲಿ ನಷ್ಟವಾಗಿತ್ತು. ಆ ನಷ್ಟವನ್ನು ಸರಿದೂಗಿಸಲು ಮತ್ತು ಕೆಲವರ ಬಳಿ ಪಡೆದುಕೊಂಡಿದ್ದ ಕೈಸಾಲ ತೀರಿಸುವುದು ಕಷ್ಟವಾಗಿತ್ತು. ಸಾಲ ತೀರಿಸಿ, ಆರ್ಥಿಕ ನಷ್ಟ ಸರಿದೂಗಿಸಿಕೊಳ್ಳಲು ಈಗಾಗಲೇ ಜೀವ ವಿಮಾ ನಿಗಮದಲ್ಲಿ ಹಲವು ಜೀವ ವಿಮಾ ಪಾಲಿಸಿ ಮಾಡಿಸಿದ್ದು, ಅದರಲ್ಲಿ ವಿಶೇಷವಾಗಿ ಡಬಲ್ ಆಕ್ಸಿಡೆಂಟ್ ಬೆನಿಫಿಟ್(ಡಿಎಬಿ) ಮಾಡಿಸಿದ್ದು, ಅಪಘಾತದಲ್ಲಿ ಮೃತಪಟ್ಟರೆ ಕೋಟಿಗಟ್ಟಲೇ ಹಣ ಬರಲಿದೆ ಎಂದು ತಿಳಿದು, ಅಪರಿಚಿತ ವ್ಯಕ್ತಿಯನ್ನು ಕರೆ ತಂದು, ಇತರರ ಸಹಾಯದಿಂದ ಅಪರಿಚಿತ ವ್ಯಕ್ತಿಯ ಮೇಲೆ ಲಾರಿ ಹತ್ತಿಸಿ ಕೊಲೆ ಮಾಡಿದೆವು. ಬಳಿಕ ಆತನೇ ಮುನಿಸ್ವಾಮಿಗೌಡ ಎಂದು ಬಿಂಬಿಸಿ ಇನ್ಷೂರೆನ್ಸ್ ಹಣ ಪಡೆಯಲು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್‌ಪಿ ತಿಳಿಸಿದರು.

ಶಿಲ್ಪಾರಾಣಿ ಎಸ್ಕೇಪ್ :
ಗಂಡನ ಈ ಪ್ಲಾನ್‌ಗೆ ಕೈಜೋಡಿಸಿದ್ದ ಪತ್ನಿ ಶಿಲ್ಪಾರಾಣಿ ಪರಾರಿಯಾಗಿದ್ದು, ಆಕೆಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆ ನಡೆದ ಒಂದೇ ದಿನದಲ್ಲಿ ಶಿಲ್ಪಾರಾಣಿ ಬಂದು ಮೃತಪಟ್ಟಿರುವುದು ನನ್ನ ಗಂಡ ಎಂದು ಹೇಳಿ, ಮೃತದೇಹ ತೆಗೆದುಕೊಂದು ಹೋಗಿ ಅಂತ್ಯ ಸಂಸ್ಕಾರ ಸಹ ಮಾಡಿದ್ದಳು. ಪೊಲೀಸರ ವಿಚಾರಣೆ ವೇಳೆಯಲ್ಲೂ ನಾನು ಗಂಡನನ್ನು ಕಳೆದುಕೊಂಡ ದುಃಖದಲ್ಲಿದ್ದೇನೆ ಎಂದು ಸುಳ್ಳು ಹೇಳಿದ್ದಳು. ಆದರೀಗ ಗಂಡ ಮುನಿಸ್ವಾಮಿಗೌಡ ಸಿಕ್ಕಿ ಬೀಳುತ್ತಿದ್ದಂತೆಯೇ ಪತ್ನಿ ತಲೆ ಮರೆಸಿಕೊಂಡಿದ್ದಾಳೆ.

ಮೂರು ಬಾರಿ ಪ್ರಯತ್ನ:
ಕಳವಳಕಾರಿ ಸಂಗತಿ ಎಂದರೆ ಮುನಿಸ್ವಾಮಿಗೌಡ ಮತ್ತವನ ಗ್ಯಾಂಗ್, ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಬಾರಿ ತನ್ನಂತೆಯೇ ಇರುವ ಅಮಾಯಕನ ಕೊಲೆಗೆ ಪ್ಲಾನ್ ಮಾಡಿತ್ತು. ಆದರೆ ಅದು ಒಂದಲ್ಲ ಒಂದು ಕಾರಣಕ್ಕೆ ವಿಫಲ ಆಗಿತ್ತು. ಮೂರು ಬಾರಿ ಫೇಲ್ ಆಗಿದ್ದ ಮುನಿಸ್ವಾಮಿಗೌಡ ನಾಲ್ಕನೇ ಬಾರಿಗೆ ಅಂದುಕೊಂಡಿದ್ದನ್ನು ಮಾಡಿ ಮುಗಿಸಿದ್ದ. ಅದಾದ ಬಳಿಕ ಸುಲಭವಾಗಿ ಕೋಟಿ ಕೋಟಿ ಜೀವ ವಿಮೆ ಹಣ ಪಡೆಯಬಹುದು ಎಂದು ಕನಸು ಕಂಡಿದ್ದ. ಆದರೆ ಅಂದುಕೊಂಡಿದ್ದು ಬೇರೆ, ಆಗಿದ್ದೇ ಬೇರೆ. ಇದೀಗ ಕಂಬಿ ಎಣಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net