

ಮೂಡಿಗೆರೆ: ರೈತರು ಕಟ್ಟಿದ ವಿಮಾ ಹಣವನ್ನು ವಿಮೆ ಕಂಪನಿಗೆ ಆನ್‌ಲೈನ್‌ನಲ್ಲಿ ಪಾವತಿಸದೆ ಮಾಕೋನಹಳ್ಳಿ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ವಂಚಿಸಿದ್ದಾನೆ ಎಂದು ಆರೋಪಿಸಿ ರೈತರು ಗ್ರಾಮ ಒನ್ ಕೇಂದ್ರದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮಾಕೋನಹಳ್ಳಿ ಮತ್ತು ನಂದಿಪುರ ಗ್ರಾಮಗಳ ವ್ಯಾಪ್ತಿಯಲ್ಲಿರುವ ಗ್ರಾಮ ಒನ್ ಕೇಂದ್ರದಲ್ಲಿ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬಿಮಾ ಯೋಜನೆಯಡಿ ಅಡಕೆ, ಕಾಳುಮೆಣಸು, ಶುಂಠಿ ಸೇರಿ ವಿವಿಧ ಬೆಳೆಗಳಿಗೆ ಈ ಸಾಲಿನ ವಿಮೆಯನ್ನು 2024ರ ಜುಲೈನಲ್ಲಿ ಆನ್‌ಲೈನ್ ಮೂಲಕ ಪಾವತಿಸುವಂತೆ ಗ್ರಾಮ ಒನ್ ಕೇಂದ್ರದ ಸಿಬ್ಬಂದಿಗೆ ನೀಡಿದ್ದರು. ಮುಂದಿನ ಒಂದೆರಡು ತಿಂಗಳಲ್ಲಿ ವಿಮೆ ಹಣ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದರು.
ವಿಮೆ ಹಣ ಪಾವತಿಗೆ ಕಳೆದ ವಾರವೂ ರೈತರು ಹೋಗಿದ್ದಾರೆ. ಹಣ ನೀಡಿದ ಬಳಿಕ ಸಿಬ್ಬಂದಿ ರೈತರಿಗೆ ನೀಡಿದ್ದ ಸ್ವೀಕೃತಿ ಪತ್ರದ ಬಗ್ಗೆ ರೈತರೊಬ್ಬರು ಅನುಮಾನಗೊಂಡು ಪರಿಶೀಲನೆ ನಡೆಸಿದರು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಹಣ ಪಾವತಿ ಹಂತಕ್ಕೆ ಬಂದ ಕೂಡಲೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ರೈತರಿಗೆ ಪ್ರಿಂಟ್ ನೀಡಿರುವುದು ಬೆಳಕಿಗೆ ಬಂದಿದೆ. 2024ರಲ್ಲಿ ವಿಮಾ ಕಂತು ಪಾವತಿಸಿದ್ದ ರೈತರು ಸ್ವೀಕೃತಿ ಪತ್ರ ಪರಿಶೀಲಿಸಿದಾಗ ಅದರಲ್ಲೂ ಮೋಸವಾಗಿರುವುದು ಗೊತ್ತಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ವಿಮೆ ನೋಂದಣಿ ಪರಿಶೀಲಿಸಿದಾಗ ರೈತರ ಎಲ್ಲ ಅರ್ಜಿ ಅರ್ಧದಲ್ಲೇ ಸ್ಥಗಿತವಾಗಿರುವುದು ಕಂಡುಬಂದಿದೆ.
ಮಾಕೋನಹಳ್ಳಿ ಮತ್ತು ನಂದಿಪುರ ಗ್ರಾಪಂಗಳ ವ್ಯಾಪ್ತಿಯಲ್ಲಿ 12 ಗ್ರಾಮಗಳಿವೆ. ಆ ಗ್ರಾಮಗಳ ಎಲ್ಲ ರೈತರು ಇದೇ ಗ್ರಾಮ ಒನ್ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದಾರೆ. ಅಡಕೆ ಪ್ರತಿ ಎಕರೆಗೆ 2560 ರೂ., ಕಾಳುಮೆಣಸು ಪ್ರತಿ ಎಕರೆಗೆ 960 ರೂ. ನಂತೆ 60ಕ್ಕೂ ಹೆಚ್ಚು ರೈತರು ಹಣ ಪಾವತಿಸಿದ್ದಾರೆ. 15 ಲಕ್ಷ ರೂ.ಗೂ ಹೆಚ್ಚು ಹಣ ವಂಚನೆಯಾಗಿದೆ. ವಿಮಾ ಕಂಪನಿಯಿಂದ ಬರಬೇಕಿದ್ದ ವಿಮಾ ಮೊತ್ತ 1.50 ಕೋಟಿ ರೂ.ಗೂ ಅಧಿಕವಾಗಿದೆ. ಅದು ಈಗ ರೈತರಿಗೆ ಸಿಗದಂತಾಗಿದೆ.
ಗ್ರಾಮ ಒನ್ ಕೇಂದ್ರದ ಸಿಬ್ಬಂದಿಯಿಂದ ಆದ ವಂಚನೆ ಬಗ್ಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಸೋಮವಾರ ದೂರು ನೀಡಿದ್ದಾರೆ. ಮಂಗಳವಾರ ಗ್ರಾಮ ಒನ್ ಕೇಂದ್ರದ ಎದುರು ರೈತರು ಪ್ರತಿಭಟನೆ ನಡೆಸಿದರು. ಅಷ್ಟರಲ್ಲಾಗಲೆ ಸಿಬ್ಬಂದಿ ಗ್ರಾಮ ಒನ್ ಕೇಂದ್ರಕ್ಕೆ ಬೀಗ ಹಾಕಿ ಪರಾರಿಯಾಗಿದ್ದಾನೆ.
ಅತಿಯಾದ ಮಳೆ ಮತ್ತು ಕಾಡುಪ್ರಾಣಿ ಹಾವಳಿಯಿಂದ ರೈತರ ಬೆಳೆ ನಿರಂತರವಾಗಿ ನೆಲಕಚ್ಚುತಿದೆ. ಅದಕ್ಕೆ ವಿಮೆ ಮೂಲಕ ಪರಿಹಾರ ಪಡೆಯಲೆಂದು ವಿಮೆ ಮಾಡಿಸಲು ಸ್ಥಳೀಯ ಗ್ರಾಮ ಒನ್ ಕೇಂದ್ರಕ್ಕೆ ಜಮೀನು ಮತ್ತು ಬೆಳೆಯ ದಾಖಲೆ ಹಾಗೂ ಹಣ ನೀಡಿ ನೋಂದಣಿ ಮಾಡಿಕೊಳ್ಳಲು ಮುಂದಾದರೆ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಅರ್ಜಿಯನ್ನು ಅರ್ಧದಲ್ಲಿ ಸ್ಥಗಿತಗೊಳಿಸಿ ರೈತರ ಹಣ ಲಪಟಾಯಿಸಿದ್ದಾನೆ. 5 ದಿನದಿಂದ ಸಿಬ್ಬಂದಿ ಗ್ರಾಮ ಒನ್ ಕೇಂದ್ರದ ಬಾಗಿಲು ಮುಚ್ಚಿ ರೈತರ ಹಣದೊಂದಿಗೆ ಪರಾರಿಯಾಗಿದ್ದಾನೆ. ಅತ್ತ ಹಣವೂ ಇಲ್ಲ. ಇತ್ತ ವಿಮೆಯೂ ಇಲ್ಲದಂಥ ಪರಿಸ್ಥಿತಿಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರಿಗೆ ದೂರು ನೀಡಲಾಗಿದೆ ಎಂದು ಮಾಕೋನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್.ಅಶ್ವತ್ಥ್ ತಿಳಿಸಿದರು.
ಪ್ರತಿಭಟನೆಯಲ್ಲಿ ಶತ್ರುಘ್ನ ನಂದಿಪುರ, ಸಂದೀಪ್, ಮನು, ದೇವಿಪ್ರಸಾದ್, ಕಿರಣ್, ಗಿರೀಶ್, ನಂದೀಶ್, ರಕ್ಷಿತ್, ಪ್ರಜ್ವಲ್, ರಂಗನಾಥ್ ಇತರರಿದ್ದರು.