

ಕಂಪ್ಲಿ: ವಿಮುಕ್ತ ದೇವದಾಸಿಯರ ಮಕ್ಕಳಿಗೆ ವಂಶವೃಕ್ಷ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ತಾಲೂಕು ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.
ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರದಿಂದ ವಿಮುಕ್ತ ದೇವದಾಸಿಯರ ಮೂರು ತಲೆಮಾರಿನ ಸಮೀಕ್ಷೆ ನಡೆಯುತ್ತಿದೆ. ಮರಣ ಹೊಂದಿರುವ ವಿಮುಕ್ತ ದೇವದಾಸಿಯರ ಮಕ್ಕಳಿಗೆ ತಾಯಿ ವಂಶವೃಕ್ಷ ಅಗತ್ಯವಿರುವುದರಿಂದ ಅರ್ಜಿ ಹಾಕಿದ್ದಾರೆ. ತಂದೆ-ತಾಯಿ ಮರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್ ದಾಖಲೆಗಳ ಕೊರತೆಯ ನೆಪದಿಂದ ವಂಶವೃಕ್ಷಕ್ಕೆ ಹಾಕಿದ ಅರ್ಜಿ ತಿರಸ್ಕೃತಗೊಂಡಿವೆ. ವಿಮುಕ್ತ ದೇವದಾಸಿಯರ ಪೈಕಿ ಕೆಲವರು ಮರಣ ಹೊಂದಿದ್ದು ಮರಣ ಪತ್ರ ಲಭ್ಯವಿರುವುದಿಲ್ಲ. ನ್ಯಾಯಾಲಯಕ್ಕೆ ತೆರಳಿ ಸಾವಿರಾರು ರೂಪಾಯಿ ವ್ಯಯಿಸಿ ದಾಖಲೆ ತರುವಷ್ಟು ಸಾಮರ್ಥ್ಯ ಹೊಂದಿಲ್ಲ. ಇದರಿಂದಾಗಿ ಮರಣ ಹೊಂದಿರುವ ವಿಮುಕ್ತ ದೇವದಾಸಿಯರ ವಂಶವೃಕ್ಷ ನೀಡಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಎಸ್.ನೀಲಪ್ಪ, ರಾಮಪ್ಪ, ರಾಜಶೇಖರ, ಬಡಗಿ ಮಾರುತಿ, ಮಾರೆಣ್ಣ, ಬಿ.ರಾಮ, ಚಂದ್ರಶೇಖರ, ಸಿ.ಹನುಮಂತ, ಸಿ.ಬಸವರಾಜ, ಎಚ್.ವೀರೇಶ, ಕಾಳಪ್ಪ, ಗಾದಿಲಿಂಗಪ್ಪ, ಯಂಕಮ್ಮ, ತಿಪ್ಪಮ್ಮ, ಯಶೋದಾ ಇತರರಿದ್ದರು.