ವಿಮುಕ್ತ ದೇವದಾಸಿಯರ ಪ್ರತಿಭಟನೆ 12ಕ್ಕೆ

IMG-20230602-WA0011.jpg
Published on

ದಾವಣಗೆರೆ: ವಿಮುಕ್ತ ದೇವದಾಸಿಯರ ಮಾಸಿಕ ಸಹಾಯಧನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂ.12ರಂದು ಜಿಲ್ಲಾಧಿಕಾರಿ ಹಾಗೂ ತಾಲೂಕು ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ನಿರ್ಧರಿಸಿದೆ.

ಅಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆಯಲ್ಲೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಸಂಘದ ಉಪಾಧ್ಯಕ್ಷೆ ಟಿ.ವಿ. ರೇಣುಕಮ್ಮ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರ ವಿಮುಕ್ತ ದೇವದಾಸಿಯರಿಗೆ ಹಾಲಿ 1500 ರೂ. ಮಾಸಿಕ ಸಹಾಯಧನ ನೀಡುತ್ತಿದೆ. ಆರೇಳು ವರ್ಷಗಳಿಂದ ತೀವ್ರ ಬೆಲೆ ಏರಿಕೆ ಮೊದಲಾದ ಕಾರಣಗಳಿಂದ ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಹೀಗಾಗಿ, ಮಾಸಿಕ ಸಹಾಯಧನ 3 ಸಾವಿರ ರೂ. ಗಳಿಗೆ ಹೆಚ್ಚಿಸಬೇಕು ಹಾಗೂ ವಿಮುಕ್ತ ದೇವದಾಸಿಯರಲ್ಲಿ ಪರಿತ್ಯಕ್ತರಿಗೂ ಅದನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಗಣತಿಯಲ್ಲಿ ಕೈಬಿಡಲಾದ ವಿಮುಕ್ತ ದೇವದಾಸಿಯರನ್ನು ಮರುಸೇರ್ಪಡೆ ಮಾಡುವ ಮೂಲಕ ಅವರಿಗೂ ಅವರ ಮಕ್ಕಳು ಮತ್ತು ಕುಟುಂಬದ ಸದಸ್ಯರನ್ನು ತಕ್ಷಣವೇ ಗಣತಿ ಮಾಡಿ ಎಲ್ಲ ರೀತಿ ನೆರವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ವಿಮುಕ್ತ ದೇವದಾಸಿಯರ ಮಕ್ಕಳ ಮದುವೆಗೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು. ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡಬೇಕು. ತಲಾ 5 ಎಕರೆ ನೀರಾವರಿ ಜಮೀನು ಉಚಿತವಾಗಿ ಒದಗಿಸಬೇಕು. ನಿವೇಶನ ರಹಿತರಿಗೆ 7 ಲಕ್ಷ ರೂ. ಮೌಲ್ಯದ ಮನೆ ನಿರ್ಮಿಸಿಕೊಡಬೇಕು.

ಎಸ್ಸಿ- ಎಸ್ಟಿ ಪಂಗಡದ ಜನಸಂಖ್ಯೆಗನುಸಾರ ಅನುದಾನ ಬಿಡುಗಡೆಗೊಳಿಸಬೇಕು. ಎಸ್‌ಇಪಿ- ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಬೇಕು. ಸ್ವಯಂ ಉದ್ಯೋಗಕ್ಕೆ ವೃತ್ತಿ ತರಬೇತಿ ಶಿಬಿರ ನಡೆಸಬೇಕು ಎಂದು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಆನಂದರಾಜು, ಚನ್ನಮ್ಮ, ಮೈಲಮ್ಮ, ಮಂಜುಳಾ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net