

ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ
ಕರೊನಾ ಹಿನ್ನೆಲೆಯಲ್ಲಿ ವಿಮಾನ ಸಂಸ್ಥೆಗಳು ತೀರಾ ಆರ್ಥಿಕ ಸಂಕಷ್ಟ ಅನುಭವಿಸಿದ್ದವು. ಆದರೀಗ, ರಾಜ್ಯದಲ್ಲಿ ಸೇವೆ ಒದಗಿಸಿರುವ ವಿಮಾನ ಸಂಸ್ಥೆಗಳು ಲಾಭದತ್ತ ಮುಖ ಮಾಡಿವೆ.
ಕಳೆದ 2020ರ ಡಿಸೆಂಬರ್ ಹಾಗೂ ಪ್ರಸಕ್ತ 2021ನೇ ಸಾಲಿನ ಜನವರಿಯಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಿದವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದು ಸಹಜವಾಗಿ ವಿಮಾನ ಸಂಸ್ಥೆಗಳಲ್ಲಿ ಲವಲವಿಕೆ ಮೂಡಿಸಿದೆ. 2020ರ ಡಿಸೆಂಬರ್ ತಿಂಗಳಿಗೆ ಹೋಲಿಸಿದಾಗ 2021ರ ಜನವರಿ ತಿಂಗಳಿನಲ್ಲಿ ಬೆಂಗಳೂರು ನಿಲ್ದಾಣದಿಂದ ಪ್ರಯಾಣಿಸಿದವರು ಹಾಗೂ ಬೆಂಗಳೂರಿಗೆ ಬಂದಿಳಿದವರ ಸಂಖ್ಯೆ ಶೇ. 4.17ರಷ್ಟು ಏರಿಕೆಯಾಗಿದೆ. ಇದೇ ತೆರನಾಗಿ, ಹುಬ್ಬಳ್ಳಿಯಲ್ಲಿ ಶೇ. 29.94, ಮಂಗಳೂರಿನಲ್ಲಿ ಶೇ. 9.01, ಮೈಸೂರಿನಲ್ಲಿ ಶೇ. 17.11, ಕಲಬುರ್ಗಿಯಲ್ಲಿ ಶೇ. 8, ವಿಜಯನಗರ ಜಿಂದಾಲ್ ನಿಲ್ದಾಣದಲ್ಲಿ ಶೇ. 26.54 ರಷ್ಟು ಏರಿಕೆ ಕಂಡಿದೆ. ಆದರೆ, ಬೆಳಗಾವಿ ನಿಲ್ದಾಣದಿಂದ ಪ್ರಯಾಣಿಸಿದ ಮತ್ತು ಬಂದಿಳಿದ ಪ್ರಯಾಣಿಕರ ಸಂಖ್ಯೆ ಶೇ. 9.51ರಷ್ಟು ಕಡಿಮೆಯಾಗಿದೆ. ಇದರೊಟ್ಟಿಗೆ ಬೀದರನಲ್ಲಿಯೂ ಶೇ. 13.90ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಇವೆರಡನ್ನೂ ಬಿಟ್ಟರೆ ಇನ್ನುಳಿದ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ವಿಮಾನಗಳ ಓಡಾಟದ ಸಂಖ್ಯೆ ಒಂದೇ ತಿಂಗಳ ಅಂತರದಲ್ಲಿ ತೀರಾ ಹೆಚ್ಚಾಗಿರುವುದು ಗಮನಾರ್ಹ.
ಕರೊನಾ ತೀವ್ರವಾಗಿ ಹರಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 2020ರ ಮಾರ್ಚ್ ಕೊನೆಯ ವಾರದಲ್ಲಿ ವಿಮಾನ ಸೇವೆ ಸ್ಥಗಿತಗೊಂಡಿತ್ತು. ಮೇ ತಿಂಗಳ 25ರಿಂದ ವಿಮಾನ ಸೇವೆ ರಾಜ್ಯದಲ್ಲಿ ಪುನಃ ಆರಂಭಗೊಂಡಿತು. ಈ ನಡುವಿನ ಅವಧಿಯಲ್ಲಿ ವಿಮಾನ ಸಂಸ್ಥೆಗಳು ತೀವ್ರ ಆರ್ಥಿಕ ಪೆಟ್ಟು ಅನುಭವಿಸಿದ್ದವು. ಕೆಲ ಸಂಸ್ಥೆಗಳು ಸಿಬ್ಬಂದಿಗೆ ಸಂಬಳ ನೀಡಲೂ ಪರದಾಡಿದ್ದವು. ಮೇ ತಿಂಗಳ ಕೊನೆಯಲ್ಲಿ ಸೇವೆ ಆರಂಭವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಲು ಮುಂದಾಗಿರಲಿಲ್ಲ. ಆದರೀಗ, ರಾಜ್ಯದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಕಳೆದ 2020ರ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಕಲಬುರಗಿ, ವಿಜಯನಗರ(ಜಿಂದಾಲ್), ಬೀದರ ವಿಮಾನ ನಿಲ್ದಾಣದಿಂದ ಉಡ್ಡಯನ ಕೈಗೊಂಡ ಹಾಗೂ ನಿಲ್ದಾಣಕ್ಕೆ ಬಂದಿಳಿದ ವಿಮಾನಗಳ ಒಟ್ಟು ಸಂಖ್ಯೆ 15,920 ಆಗಿತ್ತು. 2021 ಜನವರಿಯಲ್ಲಿ ಈ ಸಂಖ್ಯೆ 16,581ಕ್ಕೆ ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸೇವೆ ನೀಡಿದ ವಿಮಾನಗಳ ಸಂಖ್ಯೆಯೂ ಹೆಚ್ಚಾಗಿದೆ. ಇದೇ ತೆರನಾಗಿ, 2020 ಡಿಸೆಂಬರ್ನಲ್ಲಿ ಪ್ರಯಾಣಿಸಿದವರ ಸಂಖ್ಯೆ 15,81,616. ಜನವರಿ 2021ರಲ್ಲಿ ಪ್ರಯಾಣಿಸಿದವರ ಸಂಖ್ಯೆ 16,52,775. ಅಂದರೆ, ಒಂದೇ ತಿಂಗಳಲ್ಲಿ 71,159 ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ಗಮನಾರ್ಹ ಬೆಳವಣಿಗೆಯಾಗಿದೆ.
ಕೋವಿಡ್ನಿಂದಾಗಿ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಕುಸಿತಗೊಂಡಿತ್ತು. ಆದರೀಗ ಚೇತರಿಕೆ ಕಂಡುಬರುತ್ತಿದೆ. ಡಿಸೆಂಬರ್ಗೆ ಹೋಲಿಸಿದಾಗ ಜನವರಿಯಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿದೆ. ಕೋವಿಡ್ ಪೂರ್ವದಲ್ಲಿ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದಾಗ ಈಗಲೂ ಸಂಖ್ಯೆ ಕಡಿಮೆಯಿದೆ. ಶೀಘ್ರದಲ್ಲೇ ಈ ಹಿಂದಿನ ವರ್ಷದ ಗುರಿ ಸಾಧನೆಯಾಗಲಿದೆ. | ಪ್ರಮೋದಕುಮಾರ ಠಾಕರೆ ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ