

ಬೆಂಗಳೂರು ಗ್ರಾಮಾಂತರ: ಕರೊನಾ ಮೊದಲ ಹಾಗೂ ಎರಡನೇ ಅಲೆ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೋವಿಡ್ ಟೆಸ್ಟ್, ಸೋಂಕಿತರ ಕ್ವಾರಂಟೈನ್ ಹಾಗೂ ಚಿಕಿತ್ಸೆಗೆ ಬೆವರು ಹರಿಸಿದ್ದ ಜಿಲ್ಲಾಡಳಿತ ಈ ಬಾರಿ ಮತ್ತೊಂದು ಸವಾಲಿಗೆ ಎದೆಯೊಡ್ಡಿದ್ದು, ರೂಪಾಂತರಿ ಓಮಿಕ್ರಾನ್ ವೈರಸ್ ಪತ್ತೆಗೂ ಹಗಲಿರುಳು ಶ್ರಮಿಸುತ್ತಿದೆ.
ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ವ್ಯಾಪ್ತಿಯ ವಿಮಾನ ನಿಲ್ದಾಣದಲ್ಲಿ ನವೆಂಬರ್‌ನಿಂದ ತಪಾಸಣೆ ಚುರುಕುಗೊಂಡಿದ್ದು, ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಇದಕ್ಕಾಗಿಯೇ ಜಿಲ್ಲಾಡಳಿತದಿಂದ 22 ಸಿಬ್ಬಂದಿ ಬೀಡು ಬಿಟ್ಟಿದ್ದು, 4 ತಪಾಸಣಾ ಕೌಂಟರ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆರ್‌ಟಿಪಿಸಿಆರ್: ಹೈ ರಿಸ್ಕ್ ದೇಶಗಳು ಹಾಗೂ ವಿದೇಶಗಳಿಂದ ಬರುವ ಪ್ರಯಾಣಿಕರನ್ನು ಆರ್‌ಟಿಪಿಸಿಆರ್ ತಪಾಸಣೆಗೊಳಪಡಿಸುತ್ತಿದ್ದು, ಸೋಂಕಿನ ಲಕ್ಷಣ ಕಂಡುಬಂದರೆ ಕ್ವಾರಂಟೈನ್ ಹಾಗೂ ಅಗತ್ಯವಿರುವವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ತಪಾಸಣೆ ವೇಳೆ ಪಡೆದ ಸ್ಯಾಬ್‌ಗಳನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
ಡಿ.20ರಂದು ನಾಲ್ವರಲ್ಲಿ ಸೋಂಕು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆಸಿದ ಕರೊನಾ ತಪಾಸಣೆ ವೇಳೆ ಲಂಡನ್‌ನಿಂದ ಆಗಮಿಸಿದ 18 ವರ್ಷದ ಯುವತಿ ಮತ್ತು 41 ವರ್ಷದ ಪುರುಷ, ಹಾಗೆಯೇ ಪ್ಯಾರಿಸ್‌ನಿಂದ ಆಗಮಿಸಿದ 45 ವರ್ಷದ ಪುರುಷ ಹಾಗೂ 15 ವರ್ಷದ ಯುವತಿಯಲ್ಲಿ ಸೋಂಕು ಕಂಡುಬಂದಿದ್ದು ನಾಲ್ವರು ಪ್ರಯಾಣಿಕರನ್ನು ಬೆಂಗಳೂರು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
31 ಸಕ್ರಿಯ ಪ್ರಕರಣ: ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಇದುವರೆಗೆ 62,132 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಇದರಲ್ಲಿ 2057ಮಂದಿ ಇತರೆ ಜಿಲ್ಲೆ ಹಾಗೂ ಹೊರರಾಜ್ಯದವರರಾಗಿದ್ದಾರೆ. ಉಳಿದ 60,075 ಮಂದಿ ಜಿಲ್ಲೆ ನಿವಾಸಿಗಳದ್ದಾಗಿದೆ. ಸದ್ಯ 61,209 ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 31 ಸಕ್ರಿಯ ಪ್ರಕರಣಳಿದ್ದು, ಇದುವರೆಗೆ 892ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಏರ್‌ಪೋರ್ಟ್‌ನಲ್ಲಿ ಜಿಲ್ಲಾಡಳಿತದಿಂದ 20ಕ್ಕೂ ಹೆಚ್ಚು ಸಿಬ್ಬಂದಿ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ ಮತ್ತಿತರ ಹಿರಿಯ ಅಧಿಕಾರಿಗಳು ಪ್ರತಿನಿತ್ಯ ಇಲ್ಲಿನ ವ್ಯವಸ್ಥೆ ಬಗ್ಗೆ ಮಾನಿಟರ್ ಮಾಡುತ್ತಿದ್ದಾರೆ. ಮುಖ್ಯವಾಗಿ ಹೈ ರಿಸ್ಕ್ ದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ. ಡಾ.ಧರ್ಮೇಂದ್ರ ಜಿಲ್ಲಾ ಮಲೇರಿಯಾ ತಡೆ ಅಧಿಕಾರಿ