ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಧಿಸೂಚನೆ

1KWR3
Published on

ಕಾರವಾರ: ಅಂಕೋಲಾದಲ್ಲಿ ವಿಮಾನ ನಿಲ್ದಾಣ ನಿರ್ವಣಕ್ಕೆ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ಮಂಗಳವಾರ ಮೊದಲ ಅಧಿಸೂಚನೆ ಹೊರಡಿಸಿದ್ದು, ಭೂ ಸ್ವಾಧೀನ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆತಿದೆ.

ಅಲಗೇರಿ ಗ್ರಾಮದಲ್ಲಿ 69 ಎಜಕರೆ 21 ಗುಂಟೆ, ಬೇಲೆಕೇರಿ ಗ್ರಾಮದಲ್ಲಿ 25 ಎಕರೆ 35 ಗುಂಟೆ ಹಾಗೂ ಬಾವಿಕೇರಿ ಗ್ರಾಮದಲ್ಲಿ 3 ಎಕರೆ 12 ಗುಂಟೆ ಸೇರಿ ಒಟ್ಟು 93 ಎಕರೆ 23 ಗುಂಟೆ 6 ಆಣೆ ಜಮೀನನ್ನು 2013 ರ ಭೂಸ್ವಾಧೀನ ಕಾಯ್ದೆಯ ಅನ್ವಯ ಸ್ವಾಧೀನ ಮಾಡಿಕೊಳ್ಳಲು ಕುಮಟಾ ಉಪವಿಭಾಧಿಕಾರಿಗಳು ಸಿದ್ಧಪಡಿಸಿದ ಕರಡು ಅಧಿಸೂಚನೆಗೆ ಅವರು ಅನುಮೋದನೆ ನೀಡಿದ್ದಾರೆ. ಅಲ್ಲದೆ, ಕುಮಟಾ ಉಪವಿಭಾಗಾಧಿಕಾರಿಯನ್ನು ಭೂ ಸ್ವಾಧೀನಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದ್ದಾರೆ. ಭೂ ಸ್ವಾಧೀನದ ವೆಚ್ಚ ಭರಿಸುವ ಸಲುವಾಗಿ ಸರ್ಕಾರ ಈಗಾಗಲೇ ಮೊದಲ ಕಂತಿನ 7.88 ಕೋಟಿ ರೂ.ಗಳನ್ನು ಯೋಜನೆ ಜಾರಿ ಏಜೆನ್ಸಿಯಾಗಿರುವ ಕರ್ನಾಟಕ ಕೈಗಾರಿಕೆ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆಎಸ್​ಎಸ್​ಐಡಿಸಿ)ಗೆ ಸರ್ಕಾರ ಬಿಡುಗಡೆ ಮಾಡಿದೆ ಎಂದು ಅವರು ಆದೇಶದಲ್ಲಿ ತಿಳಿಸಿದೆ.

260 ರೈತರ ಜಮೀನು: ಅಲಗೇರಿ ಗ್ರಾಮದಲ್ಲಿ ಭಾರತೀಯ ನೌಕಾಸೇನೆ ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ಭಾಗವಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತಿದೆ. ಅದರ ಜತೆಗೇ ಸಿವಿಲಿಯನ್ ಎನ್​ಕ್ಲೈವ್ ನಿರ್ವಣಕ್ಕೆ ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ. ಕಳೆದ ತಿಂಗಳಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಈ ಸಂಬಂಧ ಒಪ್ಪಿಗೆ ನೀಡಿತ್ತು. ಈಗಾಗಲೇ ಪ್ರಾಥಮಿಕ ಹಂತದ ಸರ್ವೆ ನಡೆದಿದ್ದು, ಅದರ ಪ್ರಕಾರ 266 ಜನರು ತಮ್ಮ ಕೃಷಿ ಹಾಗೂ ವಾಸ್ತವ್ಯದ ಭೂಮಿ ಕಳೆದುಕೊಳ್ಳಲಿದ್ದಾರೆ. ಅದರಲ್ಲಿ 63 ಮನೆಗಳೂ ಸೇರಿವೆ ಎಂದು ಕುಮಟಾ ಉಪವಿಭಾಗಾಧಿಕಾರಿ ಅಜಿತ್ ತಿಳಿಸಿದ್ದಾರೆ. ಇನ್ನು ಅಧಿಕೃತ ಸರ್ವೆ ಕಾರ್ಯ ನಡೆಯಬೇಕಿದೆ. ನಂತರ ಗ್ರಾಮ ಸಭೆ ನಡೆಯಬೇಕು ನಂತರ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗ್ರಾಮಸ್ಥರಿಂದ ವಿರೋಧ

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕಾಗಿ ದಶಕಗಳಿಂದ ಜಾಗ ಹುಟುಕಾಟಕ್ಕೆ ಪ್ರಯತ್ನ ನಡೆದಿತ್ತು. ಅಲಗೇರಿಯ ಜಾಗವನ್ನು ಗುರುತಿಸಿ ಐದಾರು ವರ್ಷವೇ ಕಳೆದಿತ್ತು. ಈಗ ಭೂ ಸ್ವಾಧೀನ ಕಾರ್ಯಕ್ಕೆ ಅಧಿಕೃತ ಚಾಲನೆ ದೊರೆತಿದೆ. ಅಲಗೇರಿಯಲ್ಲಿ ವಿಮಾನ ನಿಲ್ದಾಣಕ್ಕೆ ಜಮೀನು ಬಿಟ್ಟುಕೊಡಲು ಗ್ರಾಮಸ್ಥರು ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net