

ಕೊಳ್ಳೇಗಾಲ: ಭಾರತೀಯ ಜೀವ ವಿಮಾ ನಿಗಮದ 69ನೇ ವಾರ್ಷಿಕೋತ್ಸವದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ವಿಮಾ ಸಪ್ತಾಹ ಕಾರ್ಯಕ್ರಮದಡಿ ಜಾಥಾ ನಡೆಸಿ ವಿಮೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಎಲ್‌ಐಸಿ ಕಚೇರಿಯಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಪ್ರತಿನಿಧಿಗಳು ಘೋಷಣೆ ಕೂಗುವ ಮೂಲಕ ಜನರ ಗಮನ ಸೆಳೆದರು. ಈ ಮೂಲಕ ವಿಮೆಯ ಮಹತ್ವ, ಅದರ ಅಗತ್ಯತೆ ಮತ್ತು ಸಾರ್ವಜನಿಕರ ಒಳಿತಿಗಾಗಿ ಎಲ್‌ಐಸಿ ನೀಡುತ್ತಿರುವ ಸೇವೆಗಳ ಬಗ್ಗೆ ಅರಿವು ಮೂಡಿಸಲಾಯಿತು.
ಹಿರಿಯ ಶಾಖಾ ಅಧಿಕಾರಿ ಜಿ.ಎನ್.ಮಹದೇವಸ್ವಾಮಿ ಮಾತನಾಡಿ, ವಿಮೆ ಕೇವಲ ಹಣಕಾಸು ಸುರಕ್ಷತೆಗಷ್ಟೇ ಅಲ್ಲ, ಕುಟುಂಬದ ಭವಿಷ್ಯಕ್ಕೂ ಆತ್ಮವಿಶ್ವಾಸದ ಆಧಾರವಾಗಿದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ವಿಮೆ ಪಡೆದು ತಮ್ಮ ಹಾಗೂ ಕುಟುಂಬದ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಅಭಿವೃದ್ಧಿ ಅಧಿಕಾರಿಗಳಾದ ಬಾಲಮುರಳಿ, ಮಂಜುನಾಥ್ ಹೆಗಡೆ, ಬಾಲಸುಬ್ರಹ್ಮಣ್ಯಂ, ಪ್ರತಿನಿಧಿ ಸಂಘದ ಮಾಜಿ ಅಧ್ಯಕ್ಷ ಎಸ್.ಸತೀಶ್ ಮಧವನಹಳ್ಳಿ, ವಿವಿಧ ಪ್ರತಿನಿಧಿಗಳು ಮತ್ತು ಶಾಖೆಯ ಸಿಬ್ಬಂದಿ ಹಾಜರಿದ್ದರು.