

ತುಮಕೂರು: 2018-19ನೇ ಸಾಲಿನಲ್ಲಿ ಹವಾಮಾನ ಆಧಾರಿತ ಇನ್ಶೂರೆನ್ಸ್ ಯೋಜನೆಯಲ್ಲಿ ಕಂತು ಪಾವತಿಸಿಯೂ ವಿಮೆ ಹಣ ಪಡೆಯದೆ ಮೋಸ ಹೋಗಿರುವ ಜಿಲ್ಲೆಯ 9466 ರೈತರನ್ನು ಜಿಲ್ಲಾಡಳಿತ ಮರೆತಿದೆ.
ಸಕಾಲದಲ್ಲಿ ಕಂತು ಪಾವತಿಸಿದ್ದರೂ ಬ್ಯಾಂಕ್‌ಗಳು ಹಾಗೂ ವಿಮಾ ಕಂಪನಿಗಳ ಸಂವಹನ ಕೊರತೆಯಿಂದ ಜಿಲ್ಲೆಯ 9466 ರೈತರಿಗೆ 26.22ಕೋಟಿ ರೂ. ಹಣ ನೀಡದೆ ವರ್ಷದಿಂದ ಸತಾಯಿಸಲಾಗುತ್ತಿದೆ. ಕಳೆದ ವರ್ಷ ಡಾ.ಜಿ.ಪರಮೇಶ್ವರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ನಡೆದಿದ್ದ ಕೆಡಿಪಿ ಸಭೆಯಲ್ಲಿಯೇ ವಿಷಯ ಪ್ರಸ್ತಾಪಿಸಿ ಅಬ್ಬರಿಸಿದ್ದ ಜೆ.ಸಿ.ಮಾಧುಸ್ವಾಮಿ ಅವರು, ಈಗ ಸಚಿವರಾಗಿದ್ದು ರೈತರಿಗೆ ನ್ಯಾಯ ಕೊಡಿಸಬೇಕಾಗಿದೆ.
ಬೆಳೆ ಸಮೀಕ್ಷೆ ಹಾಗೂ ನೋಂದಣಿ ವೇಳೆ ರೈತರು ನೀಡಿರುವ ಸ್ವಯಂ ದೃಢೀಕರಣ ಪತ್ರದಲ್ಲಿ ನಮೂದಿಸಿರುವ ಬೆಳೆಗೂ ಹೊಂದಾಣಿಕೆಯಾಗದ ಕಾರಣ ಮುಂದಿಟ್ಟುಕೊಂಡು ರೈತರಿಗೆ ವಿಮೆ ಕಂತು ಪಾವತಿಸದೆ ವಂಚಿಸಲಾಗಿದೆ. ವಿಮಾ ಕಂಪನಿ ಹಾಗೂ ಬ್ಯಾಂಕ್‌ಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಈ ಹಿಂದಿನ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದು, ವಿಮಾ ಕಂಪನಿ ಹಾಗೂ ಬ್ಯಾಂಕ್‌ಗಳ ಬಗ್ಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಳೆದಿರುವ ಮೃದುಧೋರಣೆ ರೈತರಿಗೆ ಅನ್ಯಾಯವಾಗಲು ಕಾರಣವಾಗಿದೆ.
ಕಂತು ಕಟ್ಟಿಸಿಕೊಂಡಿದ್ದೇಕೆ?: ತಾಂತ್ರಿಕ ತೊಂದರೆ ಇದ್ರೆ ನಮ್ಮಿಂದ ಕಂತು ಕಟ್ಟಿಸಿಕೊಂಡಿದ್ದು ಏಕೆ? ಕಟ್ಟಿಸಿಕೊಂಡ ಕಂತಿನ ಹಣವನ್ನು 45 ದಿನದಲ್ಲಿ ವಾಪಸ್ ನೀಡದೆ ವರ್ಷಾನುಗಟ್ಟಲೆ ಇಟ್ಟುಕೊಂಡಿರುವುದು ಏಕೆ ಎಂಬ ರೈತರ ಪ್ರಶ್ನೆಗೆ ಯಾರಿಂದಲೂ ಉತ್ತರವಿಲ್ಲ. 2018-19ನೇ ಸಾಲಿನಲ್ಲಿ ಹವಾಮಾನ ಆಧಾರಿತ ಇನ್ಶೂರೆನ್ಸ್ ಯೋಜನೆಯಲ್ಲಿ 1655 ರೈತರು ತೋಟಗಾರಿಕೆ ಬೆಳೆಗೆ ನೋಂದಾಯಿಸಿದ್ದರು. 1.81 ಲಕ್ಷ ರೂ. ರೈತರ ಖಾತೆಗೆ ಪಾವತಿಯಾಗಿದೆ. 614 ಪ್ರಕರಣಗಳಿಗೆ ಆಧಾರ್ ಮಿಸ್‌ಮ್ಯಾಚ್ ಆಗಿ 1.89 ಕೋಟಿ ರೂ. ರೈತರಿಗೆ ಪಾವತಿಯಾಗಿಲ್ಲ. ಉಳಿದ 7760 ಪ್ರಕರಣದಲ್ಲಿ 19ಕೋಟಿ ರೂ. ತಾಂತ್ರಿಕ ತೊಂದರೆಯನ್ನು ಮುಂದಿಟ್ಟುಕೊಂಡು ರೈತರಿಗೆ ಕಾಯಿಸಲಾಗುತ್ತಿದೆ.
2018-19ನೇ ಸಾಲಿನಲ್ಲಿ ಜಿಲ್ಲೆಯ 9466 ರೈತರಿಗೆ ಅನ್ಯಾಯವಾಗಿದ್ದು, ಈ ಬಗ್ಗೆ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಲಾಗಿದೆ. ವಿಮಾ ಕಂತನ್ನು 45 ದಿನಕ್ಕೂ ಹೆಚ್ಚು ಸಮಯ ಇಟ್ಟುಕೊಂಡಿರುವುದು ಅಪರಾಧ, ಅನ್ಯಾಯ ಸರಿಪಡಿಸಲು ಕೇಂದ್ರ ಸರ್ಕಾರ ಹಾಗೂ ವಿಮಾ ಕಂಪನಿಗಳ ನಡುವೆ ಮಾತುಕತೆ ನಡೆಯುತ್ತಿದೆ. ಜ್ಯೋತಿಗಣೇಶ್ ವ್ಯವಸ್ಥಾಪಕ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಬ್ಯಾಂಕ್ ಸಿಬ್ಬಂದಿ ಸಿಡುಕು ಮೂತಿ ನೋಡಿಕೊಂಡು ದಿನಗಟ್ಟಲೇ ಸರತಿಯಲ್ಲಿ ನಿಂತು ವಿಮಾ ಕಂತು ಪಾವತಿಸಿದ್ದೇವೆ, ಆಗ ಸುಮ್ಮನೆ ಕಟ್ಟಿಸಿಕೊಂಡು ನಮ್ಮ ಹಣದಲ್ಲಿ ವ್ಯವಹಾರ ಮಾಡಿಕೊಂಡ ಬ್ಯಾಂಕ್ ಹಾಗೂ ವಿಮಾ ಕಂನಿಗಳು ಹಣ ವಾಪಸ್ ನೀಡುವಾಗ ತಕರಾರು ತೆಗೆದಿವೆ. ನಮ್ಮ ಅಧಿಕಾರಿಗಳು ಅವರ ತಾಳಕ್ಕೆ ಕುಣಿದು ನಮಗೆ ಮೋಸ ಮಾಡಿದ್ದಾರೆ. ಬಸವರಾಜು ರೈತ, ಹುಳಿಯಾರು