ವಿಮರ್ಶೆ, ಸಂಶೋಧನೆಗೆ ಮಾಧ್ಯಮ ಮಾರ್ಗ

2907 HULSUR 01
Published on

ಹುಲಸೂರು: ಚಾರಿತ್ರಿಕ, ಸಾಂಸ್ಕೃತಿಕ ಸಂಶೋಧನೆಗೆ ಆಕರವಾಗಿ, ವರ್ತಮಾನದ ಲೋಕ ವಿಮರ್ಶೆಗೆ ಸಾಧನವಾಗಿ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಉಪನ್ಯಾಸಕ ಭೀಮಾಶಂಕರ ಬಿರಾದಾರ ಹೇಳಿದರು.
ಗಡಿಗೌಡಗಾಂವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನ, `ಕನ್ನಡ ಸಾಹಿತ್ಯ ಮತ್ತು ಪತ್ರಿಕೆಗಳು' ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಜ್ವಲಂತ ಸಮಸ್ಯೆಗಳಿಗೆ ಕನ್ನಡಿಯಾಗಿ, ಮಾನವೀಯತೆಯನ್ನು ರಕ್ಷಿಸುವಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು ಎಂದರು.
ದೇಶದ ಬಹುತೇಕ ಬರಹಗಾರರಿಗೆ ಅಭಿವ್ಯಕ್ತಿ ಸ್ವಾತಂತ್ರÈ ಪ್ರಸ್ತುತಪಡಿಸಲು ಪತ್ರಿಕೆಗಳು ವೇದಿಕೆಗಳಾಗಿದ್ದವು. ಸಾಕ್ಷಿ, ಜಯ ಕರ್ನಾಟಕ, ಪ್ರಬುದ್ಧ ಕರ್ನಾಟಕ, ಋಜುವಾತು, ದೇಶಕಾಲ ಸೇರಿ ಹಲವು ಪತ್ರಿಕೆಗಳು ಕನ್ನಡ ಸಾಹಿತ್ಯ ಲೋಕವನ್ನು ಕಟ್ಟಿವೆ. ಪ್ರಸ್ತುತ ಪತ್ರಿಕೆಗಳು ಕನ್ನಡಕ್ಕೊಂದು ಸಾಂಸ್ಕೃತಿಕ ನಕಾಶೆ ರೂಪಿಸಿವೆ ಎಂದು ಹೇಳಿದರು.
ಕಲಬುರಗಿಯ ಉಪನ್ಯಾಸಕ ಡಾ.ಶಿವಾಜಿ ಮೇತ್ರೆ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ. ಆರಂಭದಲ್ಲಿ ಹವ್ಯಾಸವಾಗಿದ್ದ ವರದಿಗಾರಿಕೆ ನಂತರ ವೃತ್ತಿಯಾಗಿ ಮಾರ್ಪಟ್ಟಿತು. ಇದೀಗ ಉದ್ಯಮವಾಗಿ ಬೆಳೆದು ಲಾಭದತ್ತ ಮಾಧ್ಯಮ ಹೆಜ್ಜೆ ಇಟ್ಟಿದೆ. ಪತ್ರಿಕೆಗಳು ಪಕ್ಷಾತೀತ, ಧರ್ಮಾತೀತವಾಗಿ ಕೆಲಸ ಮಾಡಬೇಕಿದೆ ಎಂದು ಆಶಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಹೊನ್ನಾಡೆ ಮಾತನಾಡಿ, ಬದಲಾವಣೆಗೆ ದಾರಿದೀಪವಾಗಿರುವ ಪತ್ರಿಕೆಗಳು ಸಾಮಾಜಿಕ ಬದ್ಧತೆ, ಪ್ರಾಮಾಣಿಕ ಮತ್ತು ಕಾಳಜಿಯಿಂದ ಸಮಾಜ ಸೇವೆ ಮಾಡುತ್ತಿವೆ ಎಂದರು.
ಪತ್ರಕರ್ತ ಗುರುಪ್ರಸಾದ ಮೆಂಟೆ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಭಾಷೆ, ಕನ್ನಡ ಶಾಲೆಗಳನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು. ಕನ್ನಡ ಪತ್ರಿಕೆಗಳು ಹೆಚ್ಚು ಓದಲು ಪ್ರೇರಣೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ಉಪಾಧ್ಯಕ್ಷ ಬಸವಕುಮಾರ ಕವಟೆ ಮಾತನಾಡಿದರು. ನಗರ ಅಧ್ಯಕ್ಷ ಸಂಗಮೇಶ ಭೋಪಳೆ, ಸೂರ್ಯವಂಶಿ, ಬಂಡೆಪ್ಪ ಪಾಟೀಲ್, ಶಿವಕುಮಾರ ಪಾಟೀಲ್, ಸತೀಶ ಹಿರೇಜೇವರ್ಗಿ, ವಿಜಯಕುಮಾರ ತಾಂಬೋಳೆ, ಬಾಬು ಕೋರೆ, ಅಶೋಕ ತೇಲಂಗ, ಕಂಟೆಪ್ಪ, ದೇವಿದಾಸ ಸೂರ್ಯವಂಶಿ ಇತರರಿದ್ದರು. ಕಸಾಪ ವಲಯ ಅಧ್ಯಕ್ಷ ದೀಪಕ ಪಾಟೀಲ್ ಸ್ವಾಗತಿಸಿದರು. ಯುವರಾಜ ಬಿರಾದಾರ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net