ವಿಪತ್ತು ನಿರ್ವಹಣೆಗೆ ಸಹಭಾಗಿತ್ವ ಬೇಕು : ಡಿವೈಎಸ್ಪಿ ಗಂಗಾಧರಪ್ಪ ಅಭಿಮತ

14Kush01
Published on

ಕೊಡಗು : ವಿಪತ್ತು ನಿರ್ವಹಣೆ ಹಿನ್ನೆಲೆಯಲ್ಲಿ ಎಲ್ಲರ ಸಹಭಾಗಿತ್ವ ಮುಖ್ಯ. ಇಲಾಖೆಗಳೊಂದಿಗೆ ಸ್ಥಳೀಯ ಸಂಘಟನೆಗಳು, ಯುವಪಡೆ ಕೈಜೋಡಿಸಬೇಕು ಎನ್ನುವ ನಿಟ್ಟಿನಲ್ಲಿ ಅವರನ್ನು ಪ್ರೇರೇಪಿಸಲು ಇಂತಹ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಹೇಳಿದರು.


ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವಿಪತ್ತು ನಿರ್ವಹಣಾ ತಂಡದಿಂದ ಕೂಡಿಗೆಯಲ್ಲಿ ಪೊಲೀಸರು, ಪತ್ರಕರ್ತರು ಹಾಗೂ ಸ್ಥಳೀಯ ಆಟಗಾರರ ತಂಡದ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯಕ್ಕೆ ಕೂಡಿಗೆಯ ಸರ್ಕಾರಿ ಶಾಲೆ ಮೈದಾನದಲ್ಲಿ ಬುಧವಾರ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿದರು.


ಮುಂದಿನ ಮಳೆಗಾಲದಲ್ಲಿ ಯಾವುದೇ ರೀತಿ ವಿಪತ್ತು ಸಂಭವಿಸಿದರೂ ಸಾರ್ವಜನಿಕರು ಸಹಕರಿಸಬೇಕು. ಯಾವುದೇ ತರಹದ ಪ್ರವಾಹ, ಕುಸಿತ, ಮರಗಳು ಬಿದ್ದ ಸಂದರ್ಭ ಸ್ಥಳಕ್ಕೆ ತಲುಪುವ ನಿಟ್ಟಿನಲ್ಲಿ ಸರ್ವ ಸನ್ನದ್ಧರಾಗಿರುವುದು ಅವಶ್ಯ. ನಮ್ಮ ವ್ಯಾಪ್ತಿಯ ಎಲ್ಲ ಠಾಣೆಗಳಲ್ಲೂ ಎಲ್ಲರನ್ನು ಒಳಗೊಳ್ಳುವ ಇಂತಹ ತಂಡ ರಚನೆಗೆ ಮುಂದಾಗಿದ್ದೇವೆ ಎಂದರು.


ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಪಂದ್ಯಾವಳಿಗಳನ್ನು ಹಮ್ಮಿಕೊಂಡು ವಿಪತ್ತು ನಿರ್ವಹಣೆಗೆ ಇತರರ ಸಹಭಾಗಿತ್ವದ ಮಹತ್ವ ಏನು ಎಂಬುದನ್ನು ಜನರಿಗೆ ಮನದಟ್ಟು ಮಾಡಲಾಗುತ್ತಿದೆ ಎಂದರು. ವೃತ್ತ ನಿರೀಕ್ಷಕ ಮಹೇಶ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಕುಶಾಲನಗರ, ಸುಂಟಿಕೊಪ್ಪ ಠಾಣೆ ಅಧಿಕಾರಿ ಸಿಬ್ಬಂದಿ, ಸ್ಥಳೀಯ ಯುವಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net