

ಬಾಳೆಹೊನ್ನೂರು: ದೇವದಾನ ಗ್ರಾಮದ ಮಲಮಕ್ಕಿಯಲ್ಲಿ ಕುಸಿಯುವ ಹಂತದಲ್ಲಿದ್ದ ಮನೆಯನ್ನು ಖಾಂಡ್ಯ ಶೌರ್ಯ ವಿಪತ್ತು ಘಟಕದಿಂದ ದುರಸ್ತಿಮಾಡಿಕೊಡಲಾಯಿತು.
ಮಲಮಕ್ಕಿ ನಾಗರಾಜ್ ಎಂಬುವರು ಕುಟುಂಬಸ್ಥರಿಲ್ಲದೆ ಏಕಾಂಗಿಯಾಗಿ ವಾಸಿಸುತ್ತಿದ್ದು, ಅನಾರೋಗ್ಯ ಪೀಡಿತರಾಗಿದ್ದಾರೆ. ಕೂಲಿ ಕೆಲಸ ಮಾಡಲು ಸಹ ಅಶಕ್ತರಾಗಿದ್ದು, ಮನೆಯ ಛಾವಣಿ ಕುಸಿಯುವ ಹಂತದಲ್ಲಿತ್ತು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ 25 ಸ್ವಯಂ ಸೇವಕರು ಮಲಮಕ್ಕಿ ಗ್ರಾಮಕ್ಕೆ ಆಗಮಿಸಿ ಛಾವಣಿ ದುರಸ್ತಿಪಡಿಸಿ ನಾಗರಾಜು ಅವರ ವಾಸಕ್ಕೆ ಅನುಕೂಲ ಕಲ್ಪಿಸಿಕೊಟ್ಟರು. ಇದರೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಾಗರಾಜ್ ಅವರಿಗೆ ಒಂದು ಸಾವಿರ ರೂ. ಮಾಸಾಶನ ನೀಡಲಾಯಿತು.
ಖಾಂಡ್ಯ ಶೌರ್ಯ ವಿಪತ್ತು ಘಟಕದ ಮಾಸ್ಟರ್ ಚಂದ್ರಶೇಖರ್ ರೈ ಮಾಹಿತಿ ನೀಡಿ, ವಿಪತ್ತು ಘಟಕದ ಸ್ವಯಂ ಸೇವಕರು ಮಾನವೀಯ ಕಾರ್ಯಕ್ಕೆ ಕೈಜೋಡಿಸಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಸುರೇಶ್, ಸೇವಾಪ್ರತಿನಿಧಿ ನಂದಿನಿ, ನಂದಿತಾ, ಶಾಜಿಯಾ, ಸುಧಾಕರ್, ರೂಪಾ, ಸುರೇಶ್ ಕೋಟ್ಯಾನ್, ಅವಿನಾಶ್ ಟೆಲಿಸ್, ಮಂಜುನಾಥ್, ಮಹೇಶ್, ರಚಿತ್, ಕುಮಾರ್, ಪ್ರಮೋದ್, ಯೋಗೇಶ್, ಸಂಜಿತ್, ರಘುಪತಿ, ಸಂಪತ್, ಕೃಷ್ಣ, ಹನೀಫ್, ರಂಜಿತ್ ಇತರರಿದ್ದರು.