ವಿನಾಶದತ್ತ ಸಂಸ್ಕೃತಿ-ಪರಂಪರೆ

23. HBH 1
Published on

ಹಗರಿಬೊಮ್ಮನಹಳ್ಳಿ: ಜ್ಞಾನ ಅತ್ಯಂತ ಪವಿತ್ರವಾಗಿದ್ದು, ಶೈಕ್ಷಣಿಕವಾಗಿ ಯಾವುದೇ ಪದವಿ ಪಡೆಯದೆ ಬದುಕೆಂಬ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಜಾನಪದ ಸಾಹಿತ್ಯ ರಚಿಸಿದವರ ಬದುಕು ಅತ್ಯಂತ ಶ್ರೇಷ್ಠವಾಗಿತ್ತು ಎಂದು ವಿದ್ವಾನ್ ಜಿ.ಎಸ್.ನಟೇಶ ಹೇಳಿದರು.

ಹಂಪಾಪಟ್ಟಣಲ್ಲಿ ಮಹಾದಾಸೋಹಿ ಶರಣಬಸವೇಶ್ವರ ಸೇವಾ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶರಣಬಸವೇಶ್ವರ 20ನೇ ವರ್ಷದ ಪುರಾಣ ಸಮಾರೋಪದಲ್ಲಿ ಮಾತನಾಡಿದರು. 12ನೇ ಶತಮಾನದ ಬಸವೇಶ್ವರ ಶರಣರ ಅನುಭವ ಮಂಟಪದಲ್ಲಿ ಎಲ್ಲ ಕಾಯಕ ವರ್ಗದ, ಜಾನಪದ ಕಲಾವಿದರು, ವಿದ್ವಾಂಸರು, ಮಹಾತ್ಮರು ಪಾಲ್ಗೊಂಡಿದ್ದು ಕನ್ನಡ ನಾಡಿನ ಹೆಮ್ಮೆಯಾಗಿದೆ ಎಂದರು.

ಮಹಾಶಿವಯೋಗಿ ಕಲಬುರಗಿ ಶರಣಬಸವೇಶ್ವರ ಅವರ ತತ್ವ-ವಿಚಾರಗಳು ಎಲ್ಲ ಕಾಲಕ್ಕೂ ಸಲ್ಲುವಂಥದ್ದು. ಇಂದಿನ ಶಿಕ್ಷಣ ಮೌಲ್ಯವಿಲ್ಲದೆ ನಡೆಯುತ್ತಿರುವುದರಿಂದ ಭಾರತೀಯ ಸಂಸ್ಕೃತಿ-ಪರಂಪರೆ ವಿನಾಶದತ್ತ ಸಾಗಿದೆ. ಇದು ದುಷ್ಪರಿಣಾಮ ಬೀರುವ ಮೊದಲೇ ನಾವು ಎಚ್ಚೆತ್ತುಕೊಳ್ಳಬೇಕು ಎಂದು ನಟೇಶ ತಿಳಿಸಿದರು.

21 ದಿನ ಪ್ರವಚನ ನೀಡಿದ ಓಂ ಸುಕುಮಾರ ಗುರೂಜಿ, ದೀಪಕ್ ಸಿಂಗ್ ಹಜಾರೆ, ತಬಲಾ ಕಲಾವಿದ ರಾಜಶೇಖರ ಗೆಜ್ಜೆ, ಗ್ರಾಮದ ಜಿ.ಎಂ.ರಾಜಶೇಖರಯ್ಯ, ನಾಗರಾಜಯ್ಯ ಸ್ವಾಮಿ, ಶರಣಪ್ಪ, ಚಂದ್ರಶೇಖರ್, ಕರಿಬಸಪ್ಪ, ಭಜನೆ ಕಲಾವಿದ ಬಡಿಗೇರ್ ಪಂಪಣ್ಣ ಅವರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಬುಳ್ಳನಗೌಡ, ಈಶ್ವರಗೌಡ್ರು, ಉಪ್ಪಾರ್ ನಾಗಪ್ಪ, ತಳವಾರ ಬಿದ್ದಪ್ಪ, ನಾಗರಾಜ, ಮಾಲ್ವಿ ಕಿಟ್ಟಪ್ಪ, ಕೊಟ್ರೇಶ, ಕಂಬಾರ ಹನುಮಂತಪ್ಪ, ಎಚ್.ಭೀಮಣ್ಣ, ಗದ್ಲಿಗಟ್ಟಿ ತಿಮ್ಮಣ್ಣ, ಖಾಜಾ ಹುಸೇನ್, ಮಂಜುನಾಥ್ ಗಂಟಿ, ಮಾತಾಸೇವಾಟ್ರಸ್ಟ್ ಅಧ್ಯಕ್ಷ ಜಿ.ಶ್ರೀನಿವಾಸ್, ಎಚ್.ಶಿವಾನಂದ, ವಿ.ಗೋವಿಂದ, ನಾಗರಾಜ ಗಂಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net