

ಶೃಂಗೇರಿ: ಪಟ್ಟಣ ಪಂಚಾಯಿತಿ ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿಯ 66ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಮಹೋತ್ಸವ ಭಾನುವಾರ ಸಡಗರದಿಂದ ನೆರವೇರಿತು. ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿಬಂದ ಮಹೋತ್ಸವದಲ್ಲಿ ಮಂಗಳೂರಿನ ಅದ್ದೂರಿ ಚಂಡೆಮೇಳ, ಭಜನಾ ತಂಡಗಳ ತಾಳ-ಮೇಳ, ಸ್ತಬ್ಧಚಿತ್ರಗಳು ಸಾಥ್ ನೀಡಿದವು. ಕಲಾ ಮೇಳಗಳ ಮಹಾಸಂಗಮದೊಂದಿಗೆ ಮಹಾಗಣಪತಿಯನ್ನು ತುಂಗಾ ನದಿಯಲ್ಲಿ ವಿಸರ್ಜಿಸಲಾಯಿತು.
ಅ.27ರಂದು ಶ್ರೀ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಶನಿವಾರ ಬೆಳಗ್ಗೆ ಏಕನಾರಿಕೇಳ ಗಣಹೋಮದ ಪೂರ್ಣಾಹುತಿ ನೆರವೇರಿತು.
ಪ್ರತಿದಿನ ಸಂಜೆ 6 ಗಂಟೆಯಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿಂಡೋಡಿ ನಟೇಶ್ ಮತ್ತು ಪೂಜನಾ ದಿಂಡೋಡಿ ಬಳಗದವರಿಂದ ಭಕ್ತಿಸಂಗೀತ, ಭಾರ್ಗವ್ ಶರ್ಮಾ ಮತ್ತು ಕವನ ಶರ್ಮಾ ಅವರ ನೃತ್ಯ ನಿರ್ದೇಶನದಲ್ಲಿ ಶ್ರೀಕೃಷ್ಣ ಕಾರುಣ್ಯ ನೃತ್ಯಪ್ರದರ್ಶನ, ರಿದಂ ಲೈವ್ ಮ್ಯೂಸಿಕ್ ಆರ್ಕೇಸ್ಟ್ರಾ, ದೂರದರ್ಶನ ಖ್ಯಾತಿಯ ಪೃಥ್ವಿ ಭಟ್ ಮತ್ತು ಸುಪ್ರೀತ್ ಪಲ್ಗುಣ ಅವರಿಂದ ಸಂಗೀತಸುಧೆ ಕಾರ್ಯಕ್ರಮ, ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾಸಂಘ ಹೊನ್ನವಳ್ಳಿ ಅವರಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.