

ಕಲಬುರಗಿ: ವಿನಯ, ಉದಾರತೆ, ಪ್ರೀತಿ ಮತ್ತು ವಾತ್ಸಲ್ಯ ಸೂಫಿ ಸಂತರ ಪ್ರಮುಖ ಬೋಧನೆಗಳಾಗಿವೆ. ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಸೂರ್ಯನಂತೆ ಉದಾತ್ತರಾಗಿರಿ, ಭೂಮಿಯಂತೆ ವಿನಮ್ರರಾಗಿರಿ ಮತ್ತು ನದಿಯಂತೆ ಉದಾರರಾಗಿರಿ ಎಂದು ಹೇಳಿದ್ದಾರೆ ಎಂದು ಅಮೆರಿಕ ಅಟ್ಲಾಂಟಾದ ಎಮೋರಿ ವಿಶ್ವವಿದ್ಯಾಲಯದ ಪ್ರೊ.ಸ್ಕಾಟ್ ಕುಗಲ್ ಹೇಳಿದರು.
ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಾನವಿಕ ಮತ್ತು ಭಾಷಾ ನಿಕಾಯ ಶುಕ್ರವಾರ ಏರ್ಪಡಿಸಿದ್ದ ಡೆಕ್ಕನ್‌ನ ಸೂಫಿ ಸಂಗೀತ ಮತ್ತು ಕಾವ್ಯ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಸೂಫಿ ಪರಂಪರೆ ಎಂಬುದು ಇಸ್ಲಾಂ ಧರ್ಮದಲ್ಲಿನ ಧಾರ್ಮಿಕ ಆಚರಣೆ ಪದ್ಧತಿ. ಇದು ಇಸ್ಲಾಮಿಕ್ ಶುದ್ಧೀಕರಣ, ಆಧ್ಯಾತ್ಮಿಕ, ಧಾರ್ಮಿಕ ಮತ್ತು ತಪಸ್ವಿಗಳ ಕುರಿತಾಗಿದೆ ಎಂದರು.
ಸೂಫಿ ಸಂತರು ದೇವರು ಮತ್ತು ಭಕ್ತನ ನಡುವಿನ ನಿಕಟ ಸಂಬAಧದ ಬಗ್ಗೆ ಮಾತನಾಡುತ್ತಾರೆ. ಯಾವುದೇ ನಿರೀಕ್ಷೆಗಳಿಲ್ಲದೆ ದೇವರನ್ನು ಆತ್ಮೀಯವಾಗಿ ಪ್ರೀತಿಸಬೇಕು ಎನ್ನುತ್ತಾರೆ. ಖ್ವಾಜಾ ಬಂದಾ ನವಾಜ್ ಗೇಸುದರಾಜ್ ಆರಂಭಿಕ ದಖನಿ ಉರ್ದು ಸೂಫಿ ಸಂತರಲ್ಲಿ ಒಬ್ಬರಾಗಿದ್ದರು. ಅವರು ಕಾವ್ಯ ಮತ್ತು ಗದ್ಯ ಎರಡರಲ್ಲೂ ಸೂಫಿ ಸಾಹಿತ್ಯವನ್ನು ಬರೆದ ಡೆಕ್ಕನ್‌ನ (ದಕ್ಷಿಣ ಭಾರತ) ಮೊದಲ ಸೂಫಿ ಸಂತರು. ನಂತರ ಅನೇಕ ಡೆಕ್ಕನ್ ಸೂಫಿಗಳು ಅವರನ್ನು ಅನುಸರಿಸಿದರು ಎಂದು ತಿಳಿಸಿದರು.
ದಖನಿ ಉರ್ದು ಆಧುನಿಕ ಉರ್ದುಗಿಂತ ಭಿನ್ನವಾಗಿದೆ. ಸೂಫಿ ಸಂತರು ತಮ್ಮ ಬರಹಗಳನ್ನು ಸ್ಥಳೀಯ ಭಾಷೆ, ಕಾವ್ಯ ಮತ್ತು ಸಂಗೀತಕ್ಕೆ ಅನುಗುಣ ಅಳವಡಿಸಿಕೊಂಡರು. ಆದ್ದರಿಂದ ನಾವು ಖ್ವಾಜಾ ಬಂದಾ ನವಾಜರ ಬರಹಗಳನ್ನು ಗದ್ಯ ಮತ್ತು ಕಾವ್ಯದ ರೂಪದಲ್ಲಿ ನೋಡುತ್ತೇವೆ. ಆದರೆ ಉತ್ತರ ಭಾರತದ ಅನೇಕ ಸೂಫಿಗಳು ಕಾವ್ಯ ರೂಪದಲ್ಲಿ ಮಾತ್ರ ಬರೆದಿದ್ದಾರೆ. ಆ ಕಾಲದಲ್ಲಿ ಕನ್ನಡ ಸಾಹಿತ್ಯದಲ್ಲಿ ಗದ್ಯದ ಪ್ರಾಬಲ್ಯವೇ ಇದಕ್ಕೆ ಕಾರಣವಿರಬಹುದು. ಅಂದಿನ ಉತ್ತರ ಕರ್ನಾಟಕದಲ್ಲಿದ್ದ ಶಿವಶರಣರ ಸಾಹಿತ್ಯ ಮತ್ತು ತತ್ವಗಳು ಸೂಫಿ ಸಂತರ ಬರವಣಿಗೆಗಳ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಯಿದೆ. ಅಂದಿನ ಭಾರತೀಯ ಸಮಾಜದಲ್ಲಿ ಸೂಫೀಸಂ ಬಹುಮುಖ್ಯ ಪಾತ್ರ ವಹಿಸಿತ್ತು ಎಂದು ಪ್ರೊ.ಸ್ಕಾಟ್ ಕುಗಲ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿದರು. ಪ್ರೊ.ವಿಕ್ರಮ ವಿಸಾಜಿ, ಪ್ರೊ.ಶಿವಗಂಗಾ ರುಮ್ಮಾ, ಪ್ರೊ.ಬಸವರಾಜ ಡೋಣೂರ, ಪ್ರೊ.ಭೀಮರಾವ ಭೋಸ್ಲೆ, ಪ್ರೊ.ಸುನಿತಾ ಮಂಜನಬೈಲ್ ಇತರರಿದ್ದರು. ಡಾ.ಕುಮಾರ್ ಮಂಗಲA ಸ್ವಾಗತಿಸಿ ನಿರೂಪಣೆ ಮಾಡಿದರು. ಡಾ.ಸ್ವಪ್ನಿಲ್ ಚಾಪೇಕರ್ ವಂದಿಸಿದರು.