

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಡೇರಿಗೆ ನಟ, ಚಾಲೆಂಜಿ0ಗ್ ಸ್ಟಾರ್ ದರ್ಶನ್ ಅವರು ಭಾನುವಾರ ಬೆಳಗ್ಗೆ ಭೇಟಿ ನೀಡಿ ವೀಕ್ಷಿಸಿದರು.
ಚಿತ್ರವೊಂದರ ಪ್ರಚಾರಕ್ಕೆ ಹುಬ್ಬಳ್ಳಿಗೆ ಆಗಮಿಸಿದ್ದ ನಟ ದರ್ಶನ್ ಬೆಳ್ಳಂಬೆಳಗ್ಗೆ ಡೇರಿಗೆ ಭೇಟಿ ನೀಡಿದರು. ಅಲ್ಲಿನ ಹೋರಿಗಳು, ಆಕಳು, ಎಮ್ಮೆಗಳು ಹಾಗೂ ಆಡುಗಳನ್ನು ವೀಕ್ಷಿಸಿದರು. ಡೇರಿಯಲ್ಲಿರುವ ವಿಶೇಷ ತಳಿಯ ಹೋರಿಗಳ ಮೈದಡವಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇವೇಳೆ ಎಮ್ಮೆ ತಳಿಗಳ ಬಗ್ಗೆ ಮಾಹಿತಿ ಪಡೆದರು. ತಮ್ಮ ತೋಟದ ಮನೆಯಲ್ಲಿ ಹತ್ತಾರು ಪ್ರಾಣಿಗಳನ್ನು ಸಾಕಿರುವ ದರ್ಶನ್, ಈ ಭಾಗಕ್ಕೆ ಬಂದಾಗೊಮ್ಮೆ ವಿನಯ ಡೇರಿಗೆ ಭೇಟಿ ನೀಡುತ್ತಾರೆ. ವಿನಯ ಅವರ ಅನುಪಸ್ಥಿತಿಯಲ್ಲಿ ಆಗಮಿಸಿದ್ದ ಅವರು, ಡೇರಿಯಲ್ಲಿ ಸಾಕಿರುವ ಕುದುರೆಗಳೊಂದಿಗೆ ಕೆಲಕಾಲ ಕಳೆದರು. ವಿನಯ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಡೇರಿಯ ಮೇಲ್ವಿಚಾರಕರೊಂದಿಗೆ ಕೆಲಕಾಲ ಚರ್ಚಿಸಿ ಮಾಹಿತಿ ಪಡೆದು ಹುಬ್ಬಳ್ಳಿಗೆ ತೆರಳಿದರು.