

ಅರಸೀಕೆರೆ: ಅಕ್ರಮ-ಸಕ್ರಮ ಯೋಜನೆಯಡಿ ಶುಲ್ಕ ಪಾವತಿಸಿರುವ ರೈತರಿಗೆ ಇಂಧನ ಇಲಾಖೆ ತಕ್ಷಣವೇ ವಿದ್ಯುತ್ ಪರಿವರ್ತಕಗಳನ್ನು ವಿತರಿಸದಿದ್ದರೆ ವಿಧಾನಸೌಧದ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಮೂರ‌್ನಾಲ್ಕು ವರ್ಷಗಳ ಹಿಂದೆ ಸರ್ಕಾರ ರೈತರಿಂದ ಶುಲ್ಕ ಪಡೆದಿದೆ.ಆದರೆ ಇದೂವರೆಗೂ ಪ್ರಕ್ರಿಯೆ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ.ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದು ಕೆರೆಕಟ್ಟೆಗಳು ಭರ್ತಿಯಾಗಿದ್ದು ತರಕಾರಿ ಸೇರಿ ಕೃಷಿ ಬೆಳೆ ಬೆಳೆಯಲು ಉತ್ಸುಕರಾಗಿದ್ದಾರೆ.
ವಿದ್ಯುತ್ ಸಂಪರ್ಕ ದೊರೆಯದ ಕಾರಣ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಗಿದ್ದು ಅನ್ನದಾತರು ಪ್ರತಿನಿತ್ಯ ನನ್ನ ಮನೆ ಬಾಗಿಲಿಗೆ ಬಂದು ಪರಿರ್ವಕ ಸೌಲಭ್ಯ ಕಲ್ಪಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಿಸಲಾಗಿರುವ ಕೊಳವೆ ಬಾವಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ . ವಾಸ್ತವ ಮನಗಂಡು ಸಮಸ್ಯೆ ನೀಗಿಸಲು ಸಂಬಂಧಿಸಿದ ಇಲಾಖೆ ಹಾಗೂ ಸರ್ಕಾರಕ್ಕೆ ಒಂದು ವಾರದ ಗಡುವು ನೀಡುತ್ತಿದ್ದೇನೆ. ನಮ್ಮ ನ್ಯಾಯಯುತ ಬೇಡಿಕೆಗೆ ಮನ್ನಣೆ ದೊರೆಯದಿದ್ದಲ್ಲಿ ಸ್ಥಳೀಯವಾಗಿ ಹೋರಾಟ ನಡೆಸುವ ಜತೆಗೆ ವಿಧಾನಸೌಧದ ಎದುರು ರೈತರ ಜತೆ ಕುಳಿತು ಧರಣಿ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ನೇರ ಎಚ್ಚರಿಕೆ ನೀಡಿದರು.
ಮುಖಂಡರಾದ ಹರತನಹಳ್ಳಿ ಜಯಣ್ಣ, ಕೇಶವಣ್ಣ,ರಾಜೇಗೌಡ, ಮಹೇಶ್, ಶ್ರೀನಿವಾಸ್ ಸೇರಿ ಇನ್ನಿತರರು ಹಾಜರಿದ್ದರು.