ವಿಧಾನಸಭೆ ಫಲಿತಾಂಶ ಜಿಲ್ಲೆಯಲ್ಲಿ ಶೇಕಡವಾರು ಮತ ಗಳಿಕೆಯಲ್ಲಿ ಜೆಡಿಎಸ್ ಮುಂದೆ

ವಿಧಾನಸಭೆ ಫಲಿತಾಂಶ ಜಿಲ್ಲೆಯಲ್ಲಿ ಶೇಕಡವಾರು ಮತ ಗಳಿಕೆಯಲ್ಲಿ ಜೆಡಿಎಸ್ ಮುಂದೆ
Published on

ಹಾಸನ:  ವಿಧಾನಸಭೆ ಚುನಾವಣೆಯ ಫಲಿತಾಂಶ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ 4 ಸ್ಥಾನ, ಬಿಜೆಪಿ 2 ಸ್ಥಾನ ಹಾಗೂ ಕಾಂಗ್ರೆಸ್ ಒಂದು ಸ್ಥಾನ ಗಳಿಸಿದೆ. ಮತ ಗಳಿಗೆ ಶೇಕಡವಾರು ಪ್ರಮಾಣದಲ್ಲಿ ಜೆಡಿಎಸ್ ಮುಂದೆ ಇದ್ದರೂ ಅಧಿಕಾರದಲ್ಲಿ ಇದ್ದ ಮೂರು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಜೆಡಿಎಸ್ ಜಿಲ್ಲೆಯಲ್ಲಿ ಒಟ್ಟಾರೆ ಈ ಬಾರಿ ಶೇ.40.67 ಮತ ಪ್ರಮಾಣ ಪಡೆದಿದೆ. ಕಳೆದ ಬಾರಿ ಶೇ.48.01 ಮತ ಪ್ರಮಾಣ ಗಳಿಕೆ ಮಾಡಿತ್ತು. ಹಾಗೆ ನೋಡಿದರೆ ಈ ಬಾರಿ ಜೆಡಿಎಸ್ ಮತಗಳನ್ನು ಕಾಂಗ್ರೆಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬಿಜೆಪಿ ಕಳೆದ ಚುನಾವಣೆಯಲ್ಲಿ ಎಷ್ಟು ಶೇಕಡವಾರು ಮತಗಳನ್ನು ಪಡೆದುಕೊಂಡಿತ್ತೊ ಅಷ್ಟೇ ಪ್ರಮಾಣದಲ್ಲಿ ಈ ಬಾರಿಯೂ ಪಡೆದುಕೊಂಡಿದೆ. 2018ರ ಚುನಾವಣೆಯಲ್ಲಿ ಶೇ.19.85 ಪಡೆದಿದ್ದರೆ ಈ ಬಾರಿಯೂ ಶೇ.19.86 ಮತ ಪ್ರಮಾಣ ಗಳಿಸಿದೆ. ಇನ್ನು ಕಾಂಗ್ರೆಸ್ ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಖಾತೆ ತೆರೆದಿದ್ದರೂ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳನ್ನು ಪಡೆದಿದೆ. ಕಳೆದ ಬಾರಿ ಶೇ.29.99 ಮತ ಪಡೆದಿದ್ದರೆ ಈ ಬಾರಿ ಶೇ.32.12 ರಷ್ಟು ಶೇಕಡವಾರು ಮತ ಪ್ರಮಾಣ ಹೆಚ್ಚಿಸಿಕೊಂಡಿದೆ. ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಸೀಕೆರೆ, ಬೇಲೂರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಮತಗಳನ್ನು ಪಡೆದುಕೊಂಡಿದೆ.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ 2018ರ ಚುನಾವಣೆಯಲ್ಲಿ ಶೇ.32.60 ಮತ ಪಡೆದಿದ್ದರೆ ಈ ಬಾರಿ ಶೇ. 49.08 ಮತ ಪ್ರಮಾಣ ಗಳಿಸಿಕೊಂಡಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದ ಬಿಜೆಪಿ ಶೇ.41.02 ಮತ ಪಡೆದಿದ್ದರೆ ಈ ಬಾರಿ ಶೇ. 45.02ರಷ್ಟು ಮತ ಪ್ರಮಾಣ ಹೆಚ್ಚಿಸಿಕೊಂಡಿದ್ದರೂ ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ಕಾಂಗ್ರೆಸ್ ಕಳೆದ ಬಾರಿ ಶೇ.24.57ರಷ್ಟು ಪ್ರಮಾಣ ಪಡೆದಿತ್ತು. ಆದರೆ ಈ ಬಾರಿ ಕೇವಲ ಶೇ.2.52 ಪಡೆಯುವ ಮೂಲಕ ಠೇವಣಿ ಸಹ ಕಳೆದುಕೊಂಡಿದೆ.

ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಈ ಬಾರಿ ಶೇ.40.67 ಮತ ಪ್ರಮಾಣ ಪಡೆದು ಗೆಲುವು ಸಾಧಿಸಿದೆ. ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ಶೇ.48.01 ಮತ ಪ್ರಮಾಣ ಪಡೆದುಕೊಂಡಿತ್ತು. ಇನ್ನು ಈ ಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಮತ ಪಡೆದು ಎರಡನೇ ಸ್ಥಾನದಲ್ಲಿ ಇದ್ದಾರೆ. ಇವರು ಶೇ.28.38 ರಷ್ಟು ಮತ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾಗೆ ಕಾಂಗ್ರೆಸ್ ಕಳೆದ ಬಾರಿ ಶೇ.39.39 ಮತ ಗಳಿಸಿದ್ದರೆ ಈ ಬಾರಿ ಕೇವಲ ಶೇ.18.54ರಷ್ಟು ಮತ ಗಳಿಸುವಲ್ಲಿ ಸಫಲವಾಗಿದೆ. ಬಿಜೆಪಿ ಕಳೆದ ಬಾರಿ ಶೇ. 12.01ರಷ್ಟು ಸಾಧನೆ ಮಾಡಿತ್ತು. ಈ ಬಾರಿ ಶೇ. 10.09ರಷ್ಟು ಮತ ಪ್ರಮಾಣ ಪಡೆದಿದೆ.

ಹೊಳೆನರಸೀಪುರದಲ್ಲಿ ಜೆಡಿಎಸ್ ಕಳೆದ ಬಾರಿ ಶೇ.60.13ರಷ್ಟು ಮತ ಪ್ರಮಾಣ ಗಳಿಸಿತ್ತು. ಆದರೆ, ಈ ಬಾರಿ ಶೇ.47.51ರಷ್ಟು ಮಾತ್ರ ಮತ ಗಳಿಸಿದೆ. ಜೆಡಿಎಸ್‌ಗೆ ಪ್ರಬಲ ಪೈಪೋಟಿ ನೀಡಿದ ಕಾಂಗ್ರೆಸ್ ಕಳೆದ ಬಾರಿ ಶೇ. 35.85ರಷ್ಟು ಶೇಕಡವಾರು ಇದ್ದರೆ ಈ ಬಾರಿ ಶೇ.45.81 ರಷ್ಟು ಶೇಕಡವಾಡು ಮತಗಳನ್ನು ಪಡೆದುಕೊಂಡಿದೆ. ಇನ್ನು ಬಿಜೆಪಿ ಎರಡೂ ಚುನಾವಣೆಗಳಲ್ಲಿ ಶೇ.2ಕ್ಕಿಂತ ಹೆಚ್ಚು ಪ್ರಮಾಣದ ಮತ ಪಡೆಯುವಲ್ಲಿ ಸಫಲವಾಗಿಲ್ಲ. ಎರಡು ಬಾರಿಯೂ ಇಲ್ಲಿ ಬಿಜೆಪಿ ಠೇವಣಿ ಕಳೆದುಕೊಂಡಿದೆ.

ಶ್ರವಣಬೆಳಗೊಳದಲ್ಲಿ ಜೆಡಿಎಸ್ ಕಳೆದ ಬಾರಿ ಶೇ.63.08ರಷ್ಟು ಮತ ಪ್ರಮಾಣ ಗಳಿಸಿತ್ತು. ಆದರೆ, ಈ ಬಾರಿ ಶೇ.48.93ರಷ್ಟು ಮಾತ್ರ ಮತ ಗಳಿಸಿದೆ. ಜೆಡಿಎಸ್‌ಗೆ ಪ್ರಬಲ ಪೈಪೋಟಿ ನೀಡಿದ ಕಾಂಗ್ರೆಸ್ ಕಳೆದ ಬಾರಿ ಶೇ. 31.39ರಷ್ಟು ಶೇಕಡವಾರು ಪಡೆದಿದ್ದರೆ ಈ ಬಾರಿ ಶೇ.45.14 ರಷ್ಟು ಶೇಕಡವಾಡು ಮತಗಳನ್ನು ಪಡೆದುಕೊಂಡಿದೆ. ಇನ್ನು ಬಿಜೆಪಿ ಎರಡೂ ಚುನಾವಣೆಗಳಲ್ಲಿ ಶೇ.5ಕ್ಕಿಂತ ಹೆಚ್ಚು ಪ್ರಮಾಣದ ಮತ ಪಡೆಯಲು ಸಾಧ್ಯವಾಗಿಲ್ಲ. ಇಲ್ಲಿಯೂ ಕೂಡ ಎರಡು ಬಾರಿಯೂ ಬಿಜೆಪಿ ಠೇವಣಿ ಕಳೆದುಕೊಂಡಿದೆ.

ಅರಸೀಕೆರೆ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್ ಶೇ.54.34ರಷ್ಟು ಶೇಕಡವಾರು ಮತ ಗಳಿಸಿತ್ತು. ಆದರೆ, ಈ ಬಾರಿ ಶೇ.42.02 ಮತ ಪ್ರಮಾಣ ಪಡೆದು ಪರಾಭವಗೊಂಡಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಕೆ.ಎಂ. ಶಿವಲಿಂಗೇಗೌಡ ಅವರು ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಶೇ.52.86 ರಷ್ಟು ಮತ ಪ್ರಮಾಣ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಇಲ್ಲಿ ಕೇವಲ ಶೇ. 14.60ರಷ್ಟು ಶೇಕಡವಾರು ಮತ ಪಡೆದಿತ್ತು. ಇನ್ನು ಬಿಜೆಪಿ ಕಳೆದ ಬಾರಿ ಶೇ.14.60 ಶೇಕಡವಾರು ಮತ ಪಡೆದಿದ್ದರೆ ಈ ಬಾರಿ ಕೇವಲ ಶೇ.3.51 ಪ್ರಮಾಣ ಪಡೆದು ಠೇವಣಿ ಸಹ ಕಳೆದುಕೊಂಡಿದೆ.

ಬೇಲೂರು ಕ್ಷೇತ್ರದಲ್ಲಿ ಜೆಡಿಎಸ್ ಕಳೆದ ಬಾರಿ ಶೇ. 42.20ರಷ್ಟು ಶೇಕಡವಾರು ಮತ ಪಡೆದು ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಶೇ.23.71 ಮತ ಪ್ರಮಾಣ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಬಿಜೆಪಿ ಈ ಬಾರಿ ಶೇ. 38.76 ಮತ ಪ್ರಮಾಣ ಪಡೆದು ಗೆಲುವು ಸಾಧಿಸಿದೆ. ಕಳೆದ ಬಾರಿ ಬಿಜೆಪಿ ಶೇ. 29.27ರಷ್ಟು ಮತ ಗಳಿಸಿತ್ತು. ಇನ್ನು ಕಾಂಗ್ರೆಸ್ ಈ ಬಾರಿ ಶೇ.34.04ರಷ್ಟು ಮತ ಪಡೆದು ಎರಡನೇ ಸ್ಥಾನ ಪಡೆದಿದೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್ ಶೇ.25.95 ಶೇಕಡವಾರು ಮತ ಪ್ರಮಾಣ ಗಳಿಸಿತ್ತು.

ಸಕಲೇಶಪುರ ಕ್ಷೇತ್ರದಲ್ಲಿ ಜೆಡಿಎಸ್ ಕಳೆದ ಬಾರಿ ಶೇ. 38.67ರಷ್ಟು ಶೇಕಡವಾರು ಮತ ಪಡೆದು ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಶೇ.34.29 ಮತ ಪ್ರಮಾಣ ಗಳಿಸಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಬಿಜೆಪಿ ಈ ಬಾರಿ ಶೇ. 35.54 ಮತ ಪ್ರಮಾಣ ಪಡೆದು ಗೆಲುವು ಸಾಧಿಸಿದೆ. ಕಳೆದ ಬಾರಿ ಬಿಜೆಪಿ ಶೇ. 35.60ರಷ್ಟು ಮತ ಗಳಿಸಿತ್ತು. ಇನ್ನು ಕಾಂಗ್ರೆಸ್ ಈ ಬಾರಿ ಶೇ.25.96ರಷ್ಟು ಮತ ಪಡೆದು ಮೂರನೇ ಸ್ಥಾನ ಪಡೆದಿದೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್ ಶೇ.22.98 ಶೇಕಡವಾರು ಮತ ಪ್ರಮಾಣ ಗಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net