

ಹಾಸನ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆಗಳ ಸುವ್ಯವಸ್ಥೆ ಬಗ್ಗೆ ಚುನಾವಣಾಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಚುನಾವಣೆ ಪೂರ್ವಸಿದ್ಧತೆ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾಧಿಕಾರಿಗಳು ಸ್ವೀಪ್ ಚಟುವಟಿಕೆಗಳಲ್ಲಿ ಭಾಗವಹಿಸುವ ಜೊತೆಗೆ ತಮ್ಮ ಇಲಾಖೆಯ ಯೋಜನಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ಒತ್ತು ನೀಡಬೇಕು ಎಂದರು.
ಕಳೆದ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಿ ಕಡಿಮೆ ಮತದಾನಕ್ಕೆ ಕಾರಣವೇನು ಎಂಬುದರ ಬಗ್ಗೆ ಪರಿಶೀಲಿಸಿ ಪ್ರತಿಯೊಂದು ಮತಗಟ್ಟೆಗೆ ಸಂಬಂಧಿಸಿದಂತೆ ಪ್ರತ್ಯೇಕ ವರದಿ ಸಿದ್ಧಪಡಿಸಿ ನೀಡುವಂತೆ ಎಲ್ಲಾ ತಹಶೀಲ್ದಾರ್‌ಗಳಿಗೆ ಸೂಚಿಸಿದರು.
ಚುನಾವಣೆ ಘೋಷಣೆಯಾದ ತಕ್ಷಣ ಆಯುಧಗಳನ್ನು ಹೊಂದಿರುವವರು ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಲ್ಲದೇ ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲು ಈಗಲೇ ಸ್ಥಳ ಗುರುತಿಸುವಂತೆ ನಿರ್ದೇಶನ ನೀಡಿದರು.
ಕಡಿಮೆ ಮತದಾನವಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾನ ಮಾಡಲು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ಚಟುವಟಿಕೆಗಳನ್ನು ಕೈಗೊಳ್ಳುವುದರ ಜೊತೆಗೆ ಪ್ರತಿಯೊಂದು ಮತಗಟ್ಟೆಯಲ್ಲಿ ಚುನಾವಣೆ ಜಾಗೃತಿ ಕ್ಲಬ್ ರಚಿಸಬೇಕು. ಸ್ವೀಪ್ ಚಟುವಟಿಕೆಗಳನ್ನು ನಡೆಸಿರುವ ಬಗ್ಗೆ ಪ್ರತಿನಿತ್ಯ ಫೇಸ್ ಬುಕ್, ಟ್ವಿಟರ್‌ಗಳಲ್ಲಿ ಫೋಟೊ, ವಿಡಿಯೊ ಅಪ್ಲೋಡ್ ಮಾಡಲು ಕ್ರಮ ವಹಿಸುವಂತೆ ತಿಳಿಸಿದರು.
ಕೈಗಾರಿಕೆ, ಸಂಘ- ಸಂಸ್ಥೆಗಳು, ಶಾಲಾ-ಕಾಲೇಜುಗಳಲ್ಲಿ ಮತದಾನ ಜಾಗೃತಿ ಕ್ಲಬ್ ರಚನೆಯಾಗಬೇಕು, ಯುವ ಮತದಾರರ ನೋಂದಣಿಗೆ ಹೆಚ್ಚು ಒತ್ತು ನೀಡಿ ಮತಗಟ್ಟೆವಾರು ಯುವ ಮತದಾರರು ನೋಂದಣಿ ಆಗಿರುವ ಬಗ್ಗೆ ಪರಿಶೀಲಿಸಬೇಕು. ಒಂದು ಮತಗಟ್ಟೆಯಲ್ಲಿ ಮೂರಕ್ಕಿಂತ ಹೆಚ್ಚು ಬೂತ್‌ಗಳಿದ್ದರೆ ಮತದಾನಕ್ಕೆ ಜನರು ಸರತಿ ಸಾಲಿನಲ್ಲಿ ಸಾಗಿ ಮತದಾನ ಮಾಡಿ ಬರುವುದಕ್ಕೆ ಸ್ಥಳಾವಕಾಶ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದೇ ಇರುವ ಪ್ರದೇಶಗಳ ಗುರುತಿಸಿ ವರದಿ ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಆನಂದ್, ಆದಾಯ ತೆರಿಗೆ ಇಲಾಖೆ ತನಿಖಾ ವಿಭಾಗ ಸಹಾಯಕ ನಿರ್ದೇಶಕ ವಿನಯ್ ಆರ್. ಚೌದರಿ, ಉಪ ವಿಭಾಗಧಿಕಾರಿಗಳಾದ ಅನ್ಮೋಲ್ ಜೈನ್ ಮತ್ತು ಕೃಪಾಲಿನಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪುನೀತ್, ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಹಾಜರಿದ್ದರು.