

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಮಹಾತ್ಮಗಾಂಧಿ ನಗರ ವಿಕಾಸ (ಎಂಜಿಎನ್ವಿ) ಯೋಜನೆಯ 2ನೇ ಹಂತದ 127.50 ಕೋಟಿ ರೂ. ಅನುದಾನವನ್ನು ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಿ ಕ್ರಿಯಾಯೋಜನೆ ತಯಾರಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸಿರುವ ಬಗ್ಗೆ ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಈ ಅನುದಾನವನ್ನು ಪ್ರತಿ ವಾರ್ಡ್ಗೆ 1 ಕೋಟಿ ರೂ. ನಂತೆ ಹಂಚಿಕೆ ಮಾಡಿದ ನಂತರ ಉಳಿದ ಹಣವನ್ನು ವಿಧಾನಸಭಾ ಕ್ಷೇತ್ರವಾರು ವಿಂಗಡಣೆ ಮಾಡಬೇಕೆಂಬ ಬೇಡಿಕೆಯನ್ನು ಪಾಲಿಕೆ ಸದಸ್ಯರು ಪುನರುಚ್ಚಿಸಿದರು.
ಪಾಲಿಕೆಯ ಹಿಂದಿನ ಸಾಮಾನ್ಯ ಸಭೆ (ಜ.7)ಯಲ್ಲಿ ಈ ವಿಷಯ ಚರ್ಚೆಯಾಗಿ, ತಯಾರಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಗಿತ್ತು. ಮಂಗಳವಾರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇದೇ ಯೋಜನೆಯಡಿ ಹಂಚಿಕೆ ಮಾಡಲಾದ ಹೆಚ್ಚುವರಿ 25 ಕೋಟಿ ರೂ. (ಕೇಂದ್ರ ಸಚಿವರ ವಿವೇಚನೆ ಮೊತ್ತ) ಅನುದಾನದಡಿ ತಯಾರಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ವಿಷಯವನ್ನು ಚರ್ಚೆಗೆ ತರಲಾಗಿತ್ತು.
ಹಿಂದಿನ ಸಭೆಯ ನಿರ್ಣಯದಲ್ಲಿ ದೃಢೀಕರಣಕ್ಕೆ ಕಾಯದೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಉಲ್ಲೇಖಿಸಿರುವುದನ್ನು ಬಿಜೆಪಿಯ ರಾಧಾಬಾಯಿ ಸಫಾರೆ, ಉಮೇಶಗೌಡ ಕೌಜಗೇರಿ ಪ್ರಶ್ನಿಸಿದರು. ಸಭೆಯ ನಡಾವಳಿಯ ದಾಖಲಾತಿಯಲ್ಲಿ ಟೈಪಿಂಗ್ ದೋಷ ಆಗಿರಬಹುದು. ಸರಿಯಾಗಿ ಬರೆಯಲು ಹೇಳಿರಿ ಎಂದು ಆಗ್ರಹಿಸಿದರು.
ಬಿಜೆಪಿಯ ಈರೇಶ ಅಂಚಟಗೇರಿ ಮಾತನಾಡಿ, ಎಂಜಿಎನ್ವಿ ಯೋಜನೆಯಡಿ 87 ಸದಸ್ಯರಿಗೆ (ನಾಮ ನಿರ್ದೇಶಿತ ಐವರು ಸೇರಿ) ತಲಾ 1 ಕೋಟಿ ರೂ. ಹಂಚಿಕೆ ಮಾಡಿ ಕ್ರಿಯಾ ಯೋಜನೆ ತಯಾರಿಸಬೇಕೆಂದು ಹಿಂದಿನ ಸಭೆಯಲ್ಲಿ ಚರ್ಚೆಯಾಗಿತ್ತು. ಆದರೆ, ವಿಧಾನಸಭಾ ಕ್ಷೇತ್ರವಾರು ತಯಾರಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಯಡಿ ಟೆಂಡರ್ ಕರೆಯುವ ಅಧಿಕಾರ ಪಾಲಿಕೆಗೆ ನೀಡಬೇಕೆಂದೂ ಸಹ ಚರ್ಚೆಯಾಗಿತ್ತು. ಪೌರಾಡಳಿತ ನಿರ್ದೇಶನಾಲಯವೇ ಟೆಂಡರ್ ಕರೆಯುವುದಾದರೆ ಈ ವಿಷಯವನ್ನು ಪಾಲಿಕೆಯ ಅನುಮೋದನೆಗೆ ತರುವುದು ನಾಮಕಾವಾಸ್ತೆ ಆಗುತ್ತದೆ ಎಂದು ಹೇಳಿದರು.
ಶಾಸಕರು ನೀಡಿದ ಕಾಮಗಾರಿಗಳ ಪಟ್ಟಿಗೆ ಅನುಗುಣವಾಗಿ ತಯಾರಿಸಲಾದ ಕ್ರಿಯಾ ಯೋಜನೆಗೆ ನಾವಾಗಲಿ (ಬಿಜೆಪಿ), ನೀವಾಗಲಿ (ಕಾಂಗ್ರೆಸ್ ) ವಿರೋಧ ಮಾಡಲು ಸಾಧ್ಯವೇ ? ಒಮ್ಮೆ ಅನುಮೋದನೆ ನೀಡಿದ ವಿಷಯದಲ್ಲಿ ಮಾರ್ಪಾಡು ಮಾಡಲು ಸಾಧ್ಯವೇ ಎಂದು ತಿಪ್ಪಣ್ಣ ಮಜ್ಜಗಿ ಪ್ರಶ್ನಿಸಿದರು.
ಈ ವಿಷಯದಲ್ಲಿ ದೃಢೀಕರಣಕ್ಕೆ ಕಾಯದೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಿಯಿಸಿರುವಾಗ ಈ ಸಭೆಯಲ್ಲಿ ತಿದ್ದುಪಡಿ ಮಾಡಬಹುದೇ? ವಾರ್ಡ್ವಾರು 1 ಕೋಟಿ ರೂ. ಹಂಚಿಕೆ ಮಾಡುವಂತೆ ಬೇಡಿಕೆ ಇಟ್ಟಿರುವ ನಾವು ಅದಕ್ಕೆ ಅನುಗುಣವಾಗಿ ಕಾಮಗಾರಿಗಳ ಪಟ್ಟಿಯನ್ನೇ ಕೊಟ್ಟಿಲ್ಲ ಎಂದು ಕೆಲ ಸದಸ್ಯರು ಹೇಳಿದರು.
ಈ ಕುರಿತು ಮೇಯರ್ ರಾಮಪ್ಪ ಬಡಿಗೇರ ಸಭೆಯಲ್ಲಿಯೇ ಕಾನೂನು ಅಧಿಕಾರಿಗಳು ಸಲಹೆ ಕೇಳಿದರು. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಒಮ್ಮೆ ತೆಗೆದುಕೊಂಡ ನಿರ್ಣಯವನ್ನು 3 ತಿಂಗಳ ಒಳಗೆ ಮಾರ್ಪಾಡು ಅಥವಾ ವಜಾ ಮಾಡಲು ಬರುವುದಿಲ್ಲ ಎಂದು ಕಾನೂನು ಅಧಿಕಾರಿ ಸಭೆಗೆ ತಿಳಿಸಿದರು.
ಹಿಂದಿನ ಸಭೆಯ ನಿರ್ಣಯದಲ್ಲಿ ಯಾವುದೇ ಮಾರ್ಪಾಡು ಮಾಡುವುದಿಲ್ಲ. ಪ್ರತಿ ವಾರ್ಡ್ಗೆ ಕೋಟಿ ರೂ. ಅನುದಾನ ನೀಡುವಂತೆ ಹಾಗೂ ಎಂಜಿಎನ್ವಿ ಯೋಜನೆಯಡಿ ಹಂಚಿಕೆ ಮಾಡಲಾದ ಹೆಚ್ಚುವರಿ 25 ಕೋಟಿ ರೂ. ಅನುದಾನದಡಿ ತಯಾರಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮೇಯರ್ ರಾಮಪ್ಪ ಬಡಿಗೇರ ರೂಲಿಂಗ್ ನೀಡಿದರು.