

ತುಮಕೂರು : ರಾಜ್ಯ ವಿಧಾನ ಪರಿಷತ್ ಘನತೆ ಕುಸಿದಿದ್ದು, ನಾನು ಅದನ್ನು ಸವಾಲಾಗಿ ಸ್ವೀಕರಿಸಿ ಗೌರವವನ್ನು ಎತ್ತಿ ಹಿಡಿದು ದೇಶದಲ್ಲೇ ಮಾದರಿ ಪರಿಷತ್ ಆಗಿ ರೂಪಿಸಲು ಹಗಲಿರುಳು ಶ್ರಮಿಸುತ್ತೇನೆ ಎಂದು ವಿಧಾನ ಪರಿಷತ್ ನೂತನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸಿದ್ಧಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇತಿಹಾಸ ಹೊಂದಿರುವ ವಿಧಾನ ಪರಿಷತ್ ಇಡೀ ದೇಶಕ್ಕೆ ಮಾದರಿಯಾಗಬೇಕಾಗಿದೆ. ಆ ನಿಟ್ಟಿನಲ್ಲಿ ಸಭಾಪತಿಯಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಸಭಾಪತಿ ಹುದ್ದೆ ಸಂವಿಧಾನ ಬದ್ಧವಾದ, ಜವಾಬ್ದಾರಿಯುತ ಸ್ಥಾನ. ಇಂತಹ ಹುದ್ದೆಯನ್ನು ನಾನು ಅಲಂಕರಿಸಿದ್ದೇನೆ. ಸದನವನ್ನು ಉತ್ತಮ ರೀತಿಯಲ್ಲಿ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಯಾವುದೇ ರೀತಿಯ ಲಾಭ, ನಷ್ಟದ ವಿಚಾರ ಮಾಡುವಂತಿಲ್ಲ. ಸಭಾಪತಿಯಾಗಿ ಮುನ್ನಡೆಸಲು ನನಗೆ ಬಹಳ ಪ್ರೀತಿ ಮತ್ತು ಗೌರವ ಇದೆ. ಈ ವ್ಯವಸ್ಥೆಯಲ್ಲಿ ಸಮಾಜಕ್ಕೆ ದೊಡ್ಡದಾದ ಕೊಡುಗೆ ಕೊಡಲು ಅವಕಾಶ ಇದೆ. ಹಾಗಾಗಿ, ಆ ಕೆಲಸವನ್ನು ಬಹಳ ಪ್ರೀತಿ, ಶ್ರದ್ಧೆಯಿಂದ ಮಾಡುತ್ತೇನೆ ಎಂದು ಹೊರಟ್ಟಿ ಹೇಳಿದರು.
ದೇವರು ಒಳ್ಳೆಯದು ಮಾಡಲಿ: ಪ್ರಸ್ತುತ ದಿನಗಳಲ್ಲಿ ಮೀಸಲಾತಿ ಬಗ್ಗೆ ಮಾತನಾಡುವುದು ಬಹಳ ಕಷ್ಟದ ಕೆಲಸ. ಯಾರ‌್ಯಾರಿಗೆ ಏನೇನು ಸೌಲಭ್ಯ ಕೊಡಬೇಕು ಎಂಬ ಬಗ್ಗೆ ಸರ್ಕಾರ ವಿಚಾರ ಮಾಡಲಿದೆ. ಗುರು ಸ್ಥಾನದಲ್ಲಿ ಇರೋರು ಅವರ ಕರ್ತವ್ಯ ಮಾಡುತ್ತಾರೆ. ಅವರಿಗೆಲ್ಲ ದೇವರು ಒಳ್ಳೆಯದು ಮಾಡಲಿ. ನಾವು ಜಾತ್ಯಾತೀತ ರಾಷ್ಟ್ರದಲ್ಲಿದ್ದೇವೆ. ಪ್ರತಿಯೊಬ್ಬರೂ, ರಾಜಕೀಯ ಪಕ್ಷಗಳು, ರಾಜಕಾರಣಿಗಳು ಚುನಾವಣೆಗೆ ನಿಲ್ಲಬೇಕಾದರೆ ಜಾತಿ ಪದ್ಧತಿ ಮುಂದಿಟ್ಟುಕೊಳ್ಳುತ್ತಾರೆ. ಇದು ಒಳ್ಳೆಯದಲ್ಲ ಎಂದರು.
ಸಲಹೆ ಕೊಡೊ ಶಕ್ತಿ ಇಲ್ಲ: ಪ್ರತಿಯೊಂದು ಸಮಾಜ ತನ್ನದೇ ಆದ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ. ಇದಕ್ಕೆ ಏನೂ ಮಾಡಲು ಆಗದು. ಆದರೆ, ನಿಸರ್ಗ ನಿಯಮಗಳು ಬದಲಾವಣೆಯಾದಂತೆ ನಾವೂ ಬದಲಾಗಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಏನೂ ಸಲಹೆ ಕೊಡಲು ಆಗುವುದಿಲ್ಲ. ಸಲಹೆ ಕೊಡುವ ಶಕ್ತಿನೂ ಇಲ್ಲ ಎಂದು ಹೊರಟ್ಟಿ ಸ್ಪಷ್ಟಪಡಿಸಿದರು.
ಮಾಜಿ ಶಾಸಕ ಕೋನರೆಡ್ಡಿ, ವಸಂತ ಹೊರಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಮುಖಂಡರಾದ ಟಿ.ಆರ್. ನಾಗರಾಜು, ಬೆಳ್ಳಿ ಲೋಕೇಶ್, ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಮುಖಂಡರಾದ ಗಂಗಹನುಮಯ್ಯ, ದಾಸೇನಹಳ್ಳಿ ಶಿವಕುಮಾರ್ ಇದ್ದರು.
ಪಾದಯಾತ್ರೆಗಳಿಗೆ ಔಷಧ ಇಲ್ಲ: ಮೀಸಲಾತಿ ಸಮಾಜದ ಶಾಂತಿ ಕದಡುವ ವಿಚಾರ. ಶಾಂತಿ ಎಲ್ಲಿದೆ. ಯಾರಿಗೂ ಶಾಂತಿ ಇಲ್ಲ. ಶಾಂತಿ ಸುವ್ಯವಸ್ಥೆ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ. ಪಂಚಮಸಾಲಿ 2ಎ ಮೀಸಲಾತಿಗಾಗಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಬಗ್ಗೆ ನಾನು ಮಾತನಾಡುವುದಿಲ್ಲ. ಶ್ರೀಗಳು ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುವಂತಹವರು. ಮೀಸಲಾತಿ ಪಾದಯಾತ್ರೆಗಳು ಜಾಸ್ತಿ ಆಗುತ್ತಿರುವುದಕ್ಕೆ ಔಷಧ ಇಲ್ಲ. ನಾವೆಲ್ಲರೂ ದೇಶ, ರಾಜ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡುವತ್ತ ಚಿಂತನೆ ನಡೆಸಬೇಕಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.